ಲಾರ್ಡ್ಸ್: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯ ಮುಂದುವರೆದಿರುವಂತೆಯೇ ರನ್ ಗಳಿಸಲು ಪರದಾಡುತ್ತಿರುವ ಇಂಗ್ಲೆಂಡ್ ದಾಂಡಿಗರನ್ನು ಟೀಂ ಇಂಡಿಯಾ ಆಟಗಾರರು ಮೈದಾನದಲ್ಲೇ ಛೇಡಿಸುತ್ತಿದ್ದಾರೆ.
ಹೌದು.. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ತುಂಬಾ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. ಹಸಿರು ಹೊದಿಕೆ ಸಹಿತದ ಪಿಚ್ ನಲ್ಲಿ ಇಂಗ್ಲೆಂಡ್ ಬ್ಯಾಟರ್ ಗಳು ರನ್ ಗಳಿಸಲು ತಿಣುಕಾಡಿದರು.
ಈ ವೇಳೆ ಭಾರತೀಯ ಬೌಲರ್ ಗಳೂ ಕೂಡ ಕರಾರುವಕ್ಕಾಗಿ ಬೌಲಿಂಗ್ ಮಾಡಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ಕಂಗೆಡಿಸಿದರು. ಹೀಗಾಗಿ ಮೊದಲ ದಿನದಾಟದಂತ್ಯದ ವೇಳೆಗೆ ಆತಿಥೇಯ ತಂಡ 4 ವಿಕೆಟ್‌ಗಳಿಗೆ 251 ರನ್ ಗಳಿಸಿತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ ಗಳಿಸುವುದಕ್ಕೆ ಹೆಸರುವಾಸಿಯಾಗಿದ್ದರೂ, ಈ ಟೆಸ್ಟ್ ಪಂದ್ಯದಲ್ಲಿ ಅವರು ರನ್ ಗಳಿಸಲು ಕಷ್ಟಪಡುತ್ತಿರುವುದು ಕಂಡುಬಂದಿದೆ. ಒಂದೆಡೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಕಷ್ಟಪಡುತ್ತಿದ್ದರೆ, ಇನ್ನೊಂದೆಡೆ ಟೀಂ ಇಂಡಿಯಾ ಆಟಗಾರರು ಇಂಗ್ಲಿಷ್ ಬ್ಯಾಟರ್ ಗಳ ಕಾಲೆಳೆದಿದ್ದು ವಿಶೇಷವಾಗಿತ್ತು.
ಪ್ರಮುಖವಾಗಿ ನಾಯಕ ಶುಭ್‌ಮನ್ ಗಿಲ್ (Shubman Gill) ಮತ್ತು ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಆಂಗ್ಲರನ್ನು ಭಾಝ್ ಬಾಲ್ ಕ್ರಿಕೆಟ್ ಹೆಸರಿನಲ್ಲಿ ಗೇಲಿ ಮಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Baz, Baz, Bazball.. ಅಂತಿದ್ರಲ್ಲಾ.. ಎಲ್ಲಿ ಆಡಿ ನೋಡೋಣ: ರೂಟ್ ಕಾಲೆಳೆದ ಸಿರಾಜ್
ಇನ್ನು ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಂದು ಇಂಗ್ಲಿಷ್ ಬ್ಯಾಟರ್ ಗಳು ನಿಧಾನಗತಿಯಲ್ಲಿ ಬ್ಯಾಟ್ ಮಾಡುತ್ತಿದ್ದರು. ಇಂಗ್ಲೆಂಡ್ ತಂಡದ ನಿಧಾನಗತಿಯ ಬ್ಯಾಟಿಂಗ್ ನೋಡಿದ ಮೊಹಮ್ಮದ್ ಸಿರಾಜ್, ಸ್ಟ್ರೈಕ್ನಲ್ಲಿದ್ದ ಜೋ ರೂಟ್ ಅವರನ್ನು ಗುರಿಯಾಗಿಸಿಕೊಂಡು ಬಾಜ್ ಬಾಲ್ ಕ್ರಿಕೆಟ್ ಆಡಿ ನೋಡೋಣ ಎಂದಿ ಛೇಡಿಸಿದರು. 'Baz, Baz, Bazball.. ಅಂತಿದ್ರಲ್ಲಾ.. ಎಲ್ಲಿ ಆಡಿ ನೋಡೋಣ.. ನಾನೂ ಕೂಡ ಒಮ್ಮೆ ನೋಡಬೇಕಿದೆ ಎಂದು ಕಾಲೆಳೆದರು. ಇದಕ್ಕೆ ಜೋ ರೂಟ್ ಪ್ರತಿಕ್ರಿಯಿಸದೇ ಸೌಮ್ಯವಾಗಿಯೇ ತಮ್ಮ ಬ್ಯಾಟಿಂಗ್ ಮುಂದುವರೆಸಿದರು.
ಬೋರಿಂಗ್ ಟೆಸ್ಟ್ ಗೆ ಸ್ವಾಗತ ಎಂದ ನಾಯಕ ಗಿಲ್
ಅತ್ತ ಸಿರಾಜ್ ಜೋ ರೂಟ್ ಕಾಲೆಳೆದರೆ ಇತ್ತ ಸ್ಲಿಪ್ ನಲ್ಲಿದ್ದ ಟೀಂ ಇಂಡಿಯಾ ನಾಯಕ ಶುಭ್ ಮನ್ ಗಿಲ್ ಕೂಡ ಆಂಗ್ಲರ ಛೇಡಿಸಿವುದು ಬಿಡಸಲಿಲ್ಲ. ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋಗಿದ್ದ ಆಂಗ್ಲರನ್ನು ಆಕ್ರಮಣಕಾರಿಯಾಗುವಂತೆ ಆಡಲು ಪ್ರಚೋದಿಸುವುದು ಗಿಲ್ ಗುರಿಯಾಗಿತ್ತು. ಹೀಗಾಗಿ ಅವರು ಇಂಗ್ಲೆಂಡ್ ತಂಡದ ನಿಧಾನಗತಿಯ ಬ್ಯಾಟಿಂಗ್ ಅನ್ನು ಟೀಕಿಸಿದರು. ದಿನದ ಎರಡನೇ ಸೆಷನ್ನಲ್ಲಿ, ‘ಇನ್ನು ಮುಂದೆ ಮನರಂಜನೆಯ ಕ್ರಿಕೆಟ್ ಇಲ್ಲ, ಸ್ನೇಹಿತರೇ… ನೀರಸ ಕ್ರಿಕೆಟ್‌ಗೆ ಸ್ವಾಗತ’ ಎಂದು ಹೇಳಿದರು. ಇದು ಸ್ಟಂಪ್ ಮೈಕ್ನಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿದ್ದು ಈ ವೀಡಿಯೊ ಕೂಡ ವೈರಲ್ ಆಗುತ್ತಿದೆ.
ಶತಕವೀರ ರೂಟ್ ಔಟ್
2ನೇ ದಿನದ ಬ್ಯಾಟಿಂಗ್ ಮುಂದವರೆಸಿರುವ ಇಂಗ್ಲೆಂಡ್ ಗೆ ಆರಂಭದಲ್ಲಿ ವೇಗಿ ಜಸ್ ಪ್ರೀತ್ ಬುಮ್ರಾ ಆಘಾತ ನೀಡಿದ್ದು, ಶತಕ ಸಿಡಿಸಿದ್ದ ಜೋ ರೂಟ್ ಮತ್ತು ಕ್ರಿಸ್ ವೋಕ್ಸ್ ರ ವಿಕೆಟ್ ಪಡೆಯುವ ಮೂಲಕ ಶುಭಾರಂಭ ಮಾಡಿದರು. ಇತ್ತೀಚಿನ ವರದಿಗಳು ಬಂದಾಗ ಇಂಗ್ಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 345 ರನ್ ಗಳಿಸಿದ್ದು, 45 ರನ್ ಗಳಿಸಿರುವ ಜೇಮಿ ಸ್ಮಿತ್ ಮತ್ತು 32 ರನ್ ಗಳಿಸಿರುವ ಬ್ರಿಡನ್ ಕರ್ಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ.