ನವದೆಹಲಿ: ಐರ್ಲೆಂಡ್‌ನ ಆಲ್‌ರೌಂಡರ್ ಕರ್ಟಿಸ್ ಕ್ಯಾಂಪರ್ ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದು, ಐದು ಎಸೆತಗಳಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಜಗತ್ತಿನ ಮೊದಲ, ಏಕೈಕ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಹೌದು.. ಕರ್ಟಿಸ್ ಕ್ಯಾಂಪರ್ ಅಂತರ-ಪ್ರಾಂತೀಯ ಟಿ20 ಟ್ರೋಫಿ ಟೂರ್ನಿಯ ಮನ್‌ಸ್ಟರ್ ರೆಡ್ಸ್ ಪರ ನಾರ್ತ್-ವೆಸ್ಟ್ ವಾರಿಯರ್ಸ್ ವಿರುದ್ಧ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಕ್ರಿಕೆಟ್ ಇತಿಹಾಸದ ಅತ್ಯಪರೂಪದ ದಾಖಲೆ ನಿರ್ಮಿಸಿದ್ದಾರೆ.
ಆ ಮೂಲಕ ಪುರುಷರ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕ್ಯಾಂಪರ್ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಕ್ಯಾಂಪರ್ 2.3 ಓವರ್‌ಗಳಲ್ಲಿ ಕೇವಲ 16 ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಕ್ಯಾಂಪರ್ ತಮ್ಮ ಎರಡನೇ ಮತ್ತು ಮೂರನೇ ಓವರ್‌ಗಳಲ್ಲಿ ಈ ಐದು ವಿಕೆಟ್‌ಗಳನ್ನು ಕಬಳಿಸಿದರು. ಇದರಿಂದಾಗಿ 189 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಾರಿಯರ್ಸ್ ತಂಡ 88 ರನ್‌ಗಳಿಗೆ ಆಲೌಟ್ ಆಯಿತು.
ಆಗಿದ್ದೇನು?
ಕ್ಯಾಂಪರ್ ಎಸೆದ ತಮ್ಮ 2 ಮತ್ತು 3ನೇ ಓವರ್ ನಲ್ಲಿ ಅಂದರೆ ಪಂದ್ಯದ 12 ಮತ್ತು 14ನೇ ಓವರ್ ನಲ್ಲಿ ಐರ್ಲೆಂಡ್ ಆಲ್ರೌಂಡರ್ ಈ ಸಾಧನೆ ಮಾಡಿದರು. ಈ ಐದು ವಿಕೆಟ್‌ಗಳ ಪೈಕಿ ಮೊದಲನೆಯ ವಿಕೆಟ್ ಜೇರೆಡ್ ವಿಲ್ಸನ್ ಅವರದ್ದು, 12ನೇ ಓವರ್‌ನ ಐದನೇ ಎಸೆತದಲ್ಲಿ ಕರ್ಟಿಸ್ ಕ್ಯಾಂಪರ್ ಚೆಂಡನ್ನು ಸ್ವಿಂಗ್ ಮಾಡಿದಾಗ ಅದು ಆಫ್ ಸ್ಟಂಪ್‌ಗೆ ಬಡಿದ ಕಾರಣ ಅವರು ಬೌಲ್ಡ್ ಆದರು.
ಮುಂದಿನ ಎಸೆತದಲ್ಲಿ, ಗ್ರಹಾಂ ಹ್ಯೂಮ್ ಬ್ಯಾಕ್‌ಫೂಟ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ನಂತರ ಕ್ಯಾಂಪರ್ ತಮ್ಮ ಮುಂದಿನ ಓವರ್‌ನ ಆರಂಭದಲ್ಲಿ ಹ್ಯಾಟ್ರಿಕ್ ಗಳಿಸಿದರು. 14ನೇ ಓವರ್‌ನ ಮೊದಲ ಎಸೆತದಲ್ಲಿ ಆಂಡಿ ಮೆಕ್‌ಬ್ರೈನ್ ಅವರನ್ನು ಔಟ್ ಮಾಡಿದ ಬಳಿಕ ಕ್ಯಾಂಪರ್ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
10ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಬಿ ಮಿಲ್ಲರ್ ಮೊದಲ ಎಸೆತದಲ್ಲಿಯೇ ಆಫ್ ಸ್ಟಂಪ್‌ನ ಹೊರಗೆ ಚೆಂಡನ್ನು ಆಡಲು ಪ್ರಯತ್ನಿಸುವಾಗ ಸ್ಟಂಪ್ಸ್ ಹಿಂದೆ ವಿಕೆಟ್ ಕೀಪರ್‌ಗೆ ಕ್ಯಾಚ್ ಕೊಟ್ಟರು. ಇದರ ನಂತರ, 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಬಂದ ಜಾಶ್ ವಿಲ್ಸನ್‌ಗೆ ಗೋಲ್ಡನ್ ಡಕ್‌ಔಟ್ ಆದರು. ಆ ಮೂಲಕ ಕ್ಯಾಂಪರ್ ಸತತ ಐದು ಎಸೆತಗಳಲ್ಲಿ 5 ವಿಕೆಟ್ ಪಡೆದು ಐತಿಹಾಸಿಕ ದಾಖಲೆ ನಿರ್ಮಿಸಿದರು.
ಇನ್ನು ಕ್ಯಾಂಪರ್ ಮಾರಕ ಬೌಲಿಂಗ್ ನೆರವಿನಿಂದಾಗಿ ಎದುರಾಳಿ ನಾರ್ತ್-ವೆಸ್ಟ್ ವಾರಿಯರ್ಸ್ ಕೇವಲ 88 ರನ್‌ಗಳಿಗೆ ಆಲ್‌ಔಟ್ ಆಯಿತು. ಇದರೊಂದಿಗೆ ಮನ್‌ಸ್ಟರ್ ರೆಡ್ಸ್ ತಂಡ 100 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಕ್ಯಾಂಪರ್ ಮೊದಲಿಗರೇನು ಅಲ್ಲ..
ಟಿ20ಐಗಳಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕ್ಯಾಂಪರ್, ಈ ಸಾಧನೆ ಮಾಡಿದ ಮೊದಲಿಗರಲ್ಲ. 2024 ರಲ್ಲಿ ದೇಶಿ ಟಿ20 ಟೂರ್ನಿಯಲ್ಲಿ ಜಿಂಬಾಬ್ವೆ ಅಂಡರ್-19 ಪರ ಈಗಲ್ಸ್ ಮಹಿಳೆಯರ ವಿರುದ್ಧ ಐದು ಎಸೆತಗಳಲ್ಲಿ ಐದು ವಿಕೆಟ್ ಪಡೆದ ಜಿಂಬಾಬ್ವೆ ಮಹಿಳಾ ಆಲ್‌ರೌಂಡರ್ ಕೆಲ್ಲಿಸ್ ಎನ್ಡ್ಲೋವು ಈ ಸಾಧನೆ ಮಾಡಿದ್ದರು.
ಆದರೆ ಪುರುಷರ ಟಿ20ಐ ಕ್ರಿಕೆಟ್‌ನ ಯಾವುದೇ ಹಂತದಲ್ಲಿ ಇಷ್ಟು ಎಸೆತಗಳಲ್ಲಿ ಐದು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಳ್ಳುವ ಮೂಲಕ ಕ್ಯಾಂಪರ್ ಇತಿಹಾಸ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ, ದೇಶಿ ಅಥವಾ ಫ್ರಾಂಚೈಸಿ ಲೀಗ್ ಪಂದ್ಯದಲ್ಲಿ ಇದುವರೆಗೂ ಯಾರೂ ಈ ದಾಖಲೆಯನ್ನು ಬರೆದಿಲ್ಲ. ಕರ್ಟಿಸ್ ಕ್ಯಾಂಪರ್ 2.2 ಓವರ್‌ಗಳಲ್ಲಿ 16 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕ್ಯಾಂಪರ್ ಹೇಳಿದ್ದೇನು?
ಇನ್ನು ತಮ್ಮ 5 ವಿಕೆಟ್ ಗಳ ಸಾಧನೆ ಕುರಿತು ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕ್ಯಾಂಪರ್, 'ಓವರ್‌ಗಳ ಬದಲಾವಣೆಯಿಂದಾಗಿ, ಏನಾಗುತ್ತಿದೆ ಎಂದು ನನಗೆ ನಿಜವಾಗಿಯೂ ಖಚಿತವಿರಲಿಲ್ಲ. ನಾನು ನನ್ನ ಗನ್‌ಗೆ ಅಂಟಿಕೊಂಡೆ ಮತ್ತು ಅದನ್ನು ನಿಜವಾಗಿಯೂ ಸರಳವಾಗಿ ಇಟ್ಟುಕೊಂಡೆ, ಲೈನ್ ಮತ್ತು ಲೆಂಥ್ ಮೇಲೆ ಗಮನಹರಿಸಿದ್ದೆ. ಅದೃಷ್ಟವಶಾತ್ ಅದು ಒಂದು ರೀತಿಯಲ್ಲಿ ನಡೆಯಿತು ಎಂದರು.
ಅಂತೆಯೇ ಇನ್ನೊಬ್ಬ ಬ್ಯಾಟರ್ ಬಂದಿದ್ದರೆ ಆರು ಎಸೆತಗಳಲ್ಲಿ ಆರು ವಿಕೆಟ್ ಸಾಧ್ಯವಾಗುತ್ತಿತ್ತೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕ್ಯಾಂಪರ್, 'ಇಲ್ಲ, ನಾನು ಹಾಗೆ ಭಾವಿಸುವುದಿಲ್ಲ. ಆ ಸಂದರ್ಭದಲ್ಲಿ ನಡೆದಿದೆ ಅಷ್ಟೇ.. ಯಾವಾಗಲೂ ಅದು ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.