ಲಾರ್ಡ್ಸ್ ಟೆಸ್ಟ್‌ನ 4ನೇ ದಿನದಂದು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಭಾರತದ ವೇಗಿ ಮೊಹಮ್ಮದ್ ಸಿರಾಜ್‌ಗೆ ಪಂದ್ಯ ಶುಲ್ಕದ ಶೇ 15 ರಷ್ಟು ದಂಡ ವಿಧಿಸಲಾಗಿದೆ.
ಇಂಗ್ಲೆಂಡ್‌ನ ಆರಂಭಿಕ ಆಟಗಾರ ಬೆನ್ ಡಕೆಟ್ ಅವರನ್ನು ಔಟ್ ಮಾಡಿದ ಸಂಭ್ರಮಾಚರಣೆ ವೇಳೆ ಸಿರಾಜ್ 'ಗಡಿ ದಾಟಿದ್ದಾರೆ' ಎಂದು ಆರೋಪಿಸಲಾಗಿದೆ. ಇದರಿಂದಾಗಿ ಆತಿಥೇಯ ತಂಡದ ಮಾಜಿ ನಾಯಕ ಅಲಸ್ಟೈರ್ ಕುಕ್ ವೇಗಿ ವಿರುದ್ಧ ಭಾರಿ ದಂಡ ವಿಧಿಸುವಂತೆ ಒತ್ತಾಯಿಸಿದ್ದರು. ಕುಕ್ ಅವರ ಸಲಹೆಯನ್ನು ಆಧರಿಸಿ ಐಸಿಸಿ, ಸೋಮವಾರ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.
ನಾಲ್ಕನೇ ದಿನದಂದು ಸಿರಾಜ್ ಅಬ್ಬರದ ಆರಂಭಿಕ ಸ್ಪೆಲ್ ಮೂಲಕ ಬೆನ್ ಡಕೆಟ್ ಮತ್ತು ಓಲಿ ಪೋಪ್ ಅವರ ವಿಕೆಟ್ ಕಬಳಿಸಿದ ಬಳಿಕ ಈ ಘಟನೆ ನಡೆಯಿತು. ಡಕೆಟ್ ಅವರನ್ನು ಔಟ್ ಮಾಡಿದ ನಂತರ, ವೇಗಿ ತನ್ನ ಫಾಲೋ-ಥ್ರೂನಲ್ಲಿ ಬ್ಯಾಟ್ಸ್‌ಮನ್‌ಗೆ ಮುಖಾಮುಖಿಯಾಗಿ ಸಂಭ್ರಮಾಚರಣೆ ಮಾಡಿದರು.
ಸಿರಾಜ್, ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಇದು "ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಬ್ಯಾಟ್ಸ್‌ಮನ್ ಔಟ್ ಆದಾಗ ಆಕ್ರಮಣಕಾರಿ ಪ್ರತಿಕ್ರಿಯೆ ನೀಡುವುದು ಅಥವಾ ಅವಮಾನಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಕ್ಕೆ" ಸಂಬಂಧಿಸಿದೆ.
ದಂಡದ ಜೊತೆಗೆ, ಸಿರಾಜ್ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ. 24 ತಿಂಗಳ ಅವಧಿಯಲ್ಲಿ ಇದು ಅವರ ಎರಡನೇ ಅಪರಾಧವಾಗಿದ್ದು, ಅವರ ಡಿಮೆರಿಟ್ ಪಾಯಿಂಟ್‌ಗಳ ಸಂಖ್ಯೆ ಎರಡಕ್ಕೇರಿದೆ.
ಒಬ್ಬ ಆಟಗಾರ 24 ತಿಂಗಳ ಅವಧಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಪಾಯಿಂಟ್‌ಗಳನ್ನು ತಲುಪಿದಾಗ, ಅವುಗಳನ್ನು ಅಮಾನತು ಪಾಯಿಂಟ್‌ಗಳಾಗಿ ಪರಿವರ್ತಿಸಲಾಗುತ್ತದೆ ಮತ್ತು ಆ ಆಟಗಾರನನ್ನು ನಿಷೇಧಿಸಲಾಗುತ್ತದೆ.
'ಅದು ಸ್ವೀಕಾರಾರ್ಹವಲ್ಲ, ಆದರೆ ಈಗ ಯಾರನ್ನು ದೂಷಿಸಬೇಕು? ವಿಕೆಟ್ ಪಡೆದಾಗ ನೀವು ಯಾರೊಬ್ಬರ ಮುಂದೆ ಬಂದು ಹಾಗೆ ಕೂಗಬಾರದು. ಅದು ತಪ್ಪು ಎಂದು ನಾನು ಪೂರ್ಣ ಹೃದಯದಿಂದ ಹೇಳುತ್ತೇನೆ. ಯಾವುದೇ ದೈಹಿಕ ಸಂಪರ್ಕ ಇರಬಾರದು. ಹೌದು, ನೀವು ಹೇಳಿದಂತೆ ವಿಕೆಟ್ ಅನ್ನು ಆಚರಿಸಿ. ಆದರೆ ನೀವು ಅವನನ್ನು ಔಟ್ ಮಾಡಿದ್ದೀರಿ; ನೀವು ಅವನ ಮುಖ ನೋಡಿ ಕೂಗುವ ಅಗತ್ಯವಿಲ್ಲ. ಆದ್ದರಿಂದ ಪರಿಣಾಮಗಳು ಉಂಟಾಗುತ್ತವೆ ಎಂದು ನಾನು ನಿರೀಕ್ಷಿಸುತ್ತೇನೆ ಮತ್ತು ಪರಿಣಾಮಗಳು ಉಂಟಾಗಬೇಕು ಅದು ನನ್ನ ಅಭಿಪ್ರಾಯ. ಅದು ಮಿತಿ ಮೀರಿದೆ ಎಂದು ನಾನು ಭಾವಿಸಿದೆ' ಎಂದು ಕುಕ್ ಭಾನುವಾರ ಬಿಬಿಸಿ ಟೆಸ್ಟ್ ಪಂದ್ಯದ ವಿಶೇಷ ಕಾರ್ಯಕ್ರಮದಲ್ಲಿ ಹೇಳಿದ್ದರು.