ಮ್ಯಾಂಚೆಸ್ಟರ್: ಓಲ್ಡ್ ಟ್ರಾಫರ್ಡ್‌ನಲ್ಲಿ ಬುಧವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಆಡುವುದನ್ನು ಭಾರತದ ವೇಗಿ ಮೊಹಮ್ಮದ್ ಸಿರಾಜ್ ಸೋಮವಾರ ಖಚಿತಪಡಿಸಿದ್ದಾರೆ.
ಐದು ಟೆಸ್ಟ್ ಪಂದ್ಯಗಳ ಪೈಕಿ ಮೂರಲ್ಲಿ ಮಾತ್ರ ಬೂಮ್ರಾ ಆಡುತ್ತಿದ್ದು, ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಆ ಟೆಸ್ಟ್ ನ್ನು ಗೆದ್ದಿದ್ದ ಭಾರತ ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 22 ರನ್‌ಗಳಿಂದ ಸೋಲು ಕಂಡಿತ್ತು.
ಐದು ಟೆಸ್ಟ್ ಸರಣಿಯಲ್ಲಿ ಭಾರತ 1-2 ಅಂತರದಿಂದ ಹಿನ್ನಡೆ ಕಾಯ್ದುಕೊಂಡಿದೆ. ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಇತ್ತೀಚೆಗೆ ಕೊನೆಯ ಎರಡು ಟೆಸ್ಟ್‌ಗಳಲ್ಲಿ ಸ್ಟಾರ್ ವೇಗಿಗಳನ್ನು ಆಡುವ ಅಗತ್ಯತೆಯ ಬಗ್ಗೆ ಮಾತನಾಡಿದ್ದರು.
ಅಭ್ಯಾಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೊಹಮ್ಮದ್ ಸಿರಾಜ್, ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಆಡೋದನ್ನು ಖಚಿತಪಡಿಸಿದರು. ನನಗೆ ತಿಳಿದಂತೆ ಜಸ್ಸಿ ಬಾಯ್ ಆಡ್ತಾರೆ. ಗಾಯದ ಕಾರಣ ಬೌಲಿಂಗ್ ವಿಭಾಗದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ಪಂದ್ಯಕ್ಕೆ ಯಾವ ರೀತಿಯ ಪ್ಲಾನ್ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಿರಾಜ್, ಇಂಗ್ಲೆಂಡ್ ಹೇಗೆ ಆಡುತ್ತದೆ ಎಂಬುದನ್ನು ಪರಿಗಣಿಸಿ ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡುವುದು ನಮ್ಮ ಯೋಜನೆಯಾಗಿದೆ. ಕಳೆದ ಪಂದ್ಯದಲ್ಲಿ ಆಡಿದಂತೆ ತಾಳ್ಮೆಯಿಂದ ಆಡಬೇಕೆಂದು ಬಯಸುತ್ತೇವೆ ಎಂದರು. ಕೈಗೆ ಗಾಯವಾಗಿರುವ ಕಾರಣ ಅರ್ಷದೀಪ್ ಸಿಂಗ್ ಮ್ಯಾಂಚೆಸ್ಟರ್ ಟೆಸ್ಟ್‌ನಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಅನ್ಶುಲ್ ಕಾಂಬೋಜ್ ತಂಡ ಸೇರಿದ್ದಾರೆ. ನಿತೀಶ್ ರೆಡ್ಡಿ ಮೊಣಕಾಲಿನ ಗಾಯದ ಕಾರಣದಿಂದಾಗಿ ಇಡೀ ಸರಣಿಯಿಂದ ಹೊರಗುಳಿದಿದ್ದಾರೆ.
ಆಕಾಶ್ ದೀಪ್ ಗೂ ಗಾಯಗಳಾಗಿದ್ದು, ಸೋಮವಾರ ಬೌಲಿಂಗ್ ನೆಟ್ ನಲ್ಲಿ ಕಾಣಿಸಿಕೊಳ್ಳಲಿಲ್ಲ. ಆಕಾಶ್ ದೀಪ್ ಅವರನ್ನು ವೈದ್ಯರು ತಪಾಸಣೆ ನಡೆಸಿದ್ದಾರೆ. ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅರ್ಷದೀಪ್ ಬದಲಿಗೆ ಅನ್ಶುಲ್ ಬಂದಿದ್ದು, ಅವರಿಗೆ ಒಳ್ಳೇಯದಾಗಲಿ ಎಂದು ಸಿರಾಜ್ ಹೇಳಿದರು.