ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ವಿದೇಶದಲ್ಲಿ 1,000ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಬರೆದಿದ್ದಾರೆ.
ಎಡಗೈ ಬ್ಯಾಟ್ಸ್‌ಮನ್ 48 ಎಸೆತಗಳಲ್ಲಿ ಔಟಾಗದೆ 37 ರನ್ ಗಳಿಸಿದರು. ಇದರಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಅವರ ಕಾಲಿಗೆ ಪೆಟ್ಟು ಬಿದ್ದು ರಕ್ತಸ್ರಾವ ಮತ್ತು ಊತ ಉಂಟಾಗಿದ್ದರಿಂದ ರಿಟೈರ್ಡ್ ಹರ್ಟ್ ಆಗಿ ಮೈದಾನದಿಂದ ಹೊರನಡೆದರು. ನಂತರ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಲಾಯಿತು.
ಪಂತ್ ಈಗ 44.26 ಸರಾಸರಿಯಲ್ಲಿ 1,018 ರನ್ ಗಳಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಾಲ್ಕು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಹೊಂದಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 146 ಆಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ವಿಕೆಟ್ ಕೀಪರ್-ಬ್ಯಾಟರ್ ತವರಿನಿಂದ ಹೊರಗೆ 1,000 ರನ್ ಗಳಿಸಿಲ್ಲ.
ಇದಲ್ಲದೆ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುನೀಲ್ ಗವಾಸ್ಕರ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಂತರ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ನಲ್ಲಿ 1,000 ರನ್ ಪೂರೈಸಿದ ಆರನೇ ಬ್ಯಾಟ್ಸ್‌ಮನ್ ಪಂತ್ ಆಗಿದ್ದಾರೆ.
ಮೊದಲ ದಿನದ ಅಂತ್ಯದಲ್ಲಿ ಪಂತ್ ಬಗ್ಗೆ ಮಾಹಿತಿ ನೀಡಿದ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್, 'ಅವರು ಖಂಡಿತವಾಗಿಯೂ ತುಂಬಾ ನೋವಿನಿಂದ ಬಳಲುತ್ತಿದ್ದರು. ಆದರೆ, ಅವರು ಸ್ಕ್ಯಾನ್‌ಗೆ ಹೋಗಿದ್ದಾರೆ. ಬಹುಶಃ ನಾಳೆ ಮಾಹಿತಿ ಸಿಗುತ್ತದೆ' ಎಂದು ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಂತ್ ಇಲ್ಲಿಯವರೆಗೆ 77.00 ಸರಾಸರಿ ಮತ್ತು 78 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 462 ರನ್ ಗಳಿಸಿದ್ದಾರೆ. ಸದ್ಯ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.
ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ. ಶಾರ್ದೂಲ್ ಠಾಕೂರ್ (19*) ಮತ್ತು ರವೀಂದ್ರ ಜಡೇಜಾ (16*) ಇಂದು ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಸಾಯಿ ಸುದರ್ಶನ್ (151 ಎಸೆತಗಳಲ್ಲಿ 61, ಏಳು ಬೌಂಡರಿಗಳು) ಮತ್ತು ಯಶಸ್ವಿ ಜೈಸ್ವಾಲ್ (107 ಎಸೆತಗಳಲ್ಲಿ 58, 10 ಬೌಂಡರಿಗಳು ಮತ್ತು ಒಂದು ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು.
ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರನ್ನು ಔಟ್ ಮಾಡಿದ ನಾಯಕ ಬೆನ್ ಸ್ಟೋಕ್ಸ್ (2/47) ಇಂಗ್ಲೆಂಡ್ ಪರ ಉತ್ತಮ ಬೌಲರ್ ಎನಿಸಿಕೊಂಡರು.