ಇತ್ತೀಚೆಗಷ್ಟೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವೇಗಿ ಯಶ್ ದಯಾಳ್ ಇದೀಗ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ದಯಾಳ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.
ದೈನಿಕ್ ಭಾಸ್ಕರ್ ವರದಿ ಪ್ರಕಾರ, ದಯಾಳ್ ಅಪ್ರಾಪ್ತ ಬಾಲಕಿಯನ್ನು ಎರಡು ವರ್ಷಗಳ ಕಾಲ ಶೋಷಣೆ ಮಾಡಿದ್ದಾರೆ. ಆಕೆಗೆ ವೃತ್ತಿಪರ ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯದ ಭರವಸೆ ನೀಡಿದ್ದಾರೆ. ಗಾಜಿಯಾಬಾದ್‌ನಲ್ಲಿ ನಡೆದ ಪ್ರತ್ಯೇಕ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ ದಯಾಳ್ ಮತ್ತೊಂದು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
ಜೈಪುರ ಪೊಲೀಸರ ಪ್ರಕಾರ, ಈಗ 19 ವರ್ಷದ ಸಂತ್ರಸ್ತೆ, ಅಪ್ರಾಪ್ತಳಾಗಿದ್ದಾಗ ಕ್ರಿಕೆಟ್ ಮೂಲಕ ದಯಾಳ್ ಅವರನ್ನು ಭೇಟಿಯಾದಳು. ಐಪಿಎಲ್ 2025 ರ ಅವಧಿಯಲ್ಲಿ ಸೇರಿದಂತೆ ಕಳೆದ ಎರಡು ವರ್ಷಗಳಿಂದ ಪದೇ ಪದೆ ಕಿರುಕುಳ ನೀಡಲಾಗಿದೆ ಎಂದು ಎಫ್‌ಐಆರ್ ಆರೋಪಿಸಿದೆ.
ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್ ಪಂದ್ಯಕ್ಕಾಗಿ ಜೈಪುರದಲ್ಲಿದ್ದಾಗ (ಏಪ್ರಿಲ್ 13 ರಂದು ಮಧ್ಯಾಹ್ನದ ಪಂದ್ಯ), ದಯಾಳ್ ಸಂತ್ರಸ್ತೆಯನ್ನು ಸೀತಾಪುರ ಹೋಟೆಲ್‌ಗೆ ಕರೆಸಿ ಮತ್ತೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಭಾವನಾತ್ಮಕ ಮತ್ತು ದೈಹಿಕ ಕಿರುಕುಳವನ್ನು ಸಹಿಸಿಕೊಂಡ ನಂತರ, ಆಕೆ ಜುಲೈ 23 ರಂದು ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ 17 ವರ್ಷದವಳಿದ್ದಾಗ ಅತ್ಯಾಚಾರ ನಡೆದಿರುವುದರಿಂದ, ಈ ಪ್ರಕರಣವನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ, 2012ರ ಅಡಿಯಲ್ಲಿ ದಾಖಲಿಸಲಾಗಿದೆ.
ಜುಲೈ 6 ರಂದು ಗಾಜಿಯಾಬಾದ್‌ನಲ್ಲಿ ಯಶ್ ದಯಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಯಾಳ್ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಐದು ವರ್ಷ ತನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದಾಗ್ಯೂ, ಅಲಹಾಬಾದ್ ಹೈಕೋರ್ಟ್ ಯಶ್ ದಯಾಳ್ ಅವರ ಬಂಧನಕ್ಕೆ ತಡೆ ನೀಡಿದೆ. ದಯಾಳ್ ಸಂತ್ರಸ್ತೆಯು ತಮ್ಮ ಕುಟುಂಬಕ್ಕೆ ಪರಿಚಿತರು ಎಂಬುದನ್ನು ಒಪ್ಪಿಕೊಂಡರು. ಆದರೆ, ವಿವಾಹವಾಗುವುದಾಗಿ ಭರವಸೆ ನೀಡಿಲ್ಲ ಎಂದರು.