ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ಬೆನ್ ಸ್ಟೋಕ್ಸ್ ಅವರ ಅಮೋಘ ಶತಕದಿಂದ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಬೃಹತ್ ಮುನ್ನಡೆ ಕಾಯ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 358 ರನ್ ಗಳಿಸಿ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 699 ರನ್ ಕಲೆ ಹಾಕಿದೆ. ಇದರೊಂದಿಗೆ ಭಾರತ 311 ರನ್ ಗಳಿಂದ ಹಿನ್ನಡೆ ಅನುಭವಿಸಿದೆ.
ಜೋ ರೂಟ್ 150 ರನ್ ಗಳಿಸಿದರೆ, ನಾಯಕ ಬೆನ್ ಸ್ಟೋಕ್ಸ್ 141 ರನ್ ಕಲೆಹಾಕಿದರು. ಭಾರತದ ಪರ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದರೆ, ಬೂಮ್ರಾ ಹಾಗೂ ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಕಾಂಬೋಜ್ ತಲಾ ಒಂದೊಂದು ವಿಕೆಟ್ ಪಡೆದರು.
ಬೆಳಗ್ಗೆ ಮೋಡ ಕವಿದ ವಾತಾವರಣದಿಂದ ಭಾರತದ ವೇಗಿಗಳಿಗೆ ಸ್ವಲ್ಪ ಮಟ್ಟದ ಅನುಕೂಲವಾಯಿತು. ವೇಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಅವರೊಂದಿಗೆ ಬೌಲಿಂಗ್ ದಾಳಿ ಆರಂಭಿಸಿದರು. ದಿನದ ಐದನೇ ಓವರ್‌ನಲ್ಲಿ ಲಿಯಾಮ್ ಡಾಸನ್ ವಿಕೆಟ್ ಪಡೆಯುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ ಕ್ರೀಸ್ ಗೆ ಅಟ್ಟಿಕೊಂಡ ಬೆನ್ ಸ್ಟೋಕ್ಸ್ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.141 ರನ್ ಗಳಿಸುವುದರೊಂದಿಗೆ ಇಂಗ್ಲೆಂಡ್ ತಂಡಕ್ಕೆ ನೆರವಾದರು.