ವಾಷಿಂಗ್ಟನ್ ಸುಂದರ್ 
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧ ವಾಷಿಂಗ್ಟನ್ ಸುಂದರ್ ಅತ್ಯುತ್ತಮ ಬ್ಯಾಟಿಂಗ್: BCCI ಆಯ್ಕೆದಾರರು, RCB ವಿರುದ್ಧ ತಂದೆ ಕಿಡಿ!

ಮಗನ ಅದ್ಭುತ ಪ್ರದರ್ಶನದ ನಂತರ, ವಾಷಿಂಗ್ಟನ್ ಸುಂದರ್ ಅವರ ತಂದೆ ಎಂ. ಸುಂದರ್ ಅವರು ಬಿಸಿಸಿಐ ಆಯ್ಕೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾನುವಾರ ಕೊನೆಗೊಂಡ ಇಂಗ್ಲೆಂಡ್ ವಿರುದ್ಧದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ ಮಾಡಿಕೊಳ್ಳುವಲ್ಲಿ ವಾಷಿಂಗ್ಟನ್ ಸುಂದರ್ ಪ್ರಮುಖ ಪಾತ್ರ ವಹಿಸಿದರು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 669 ರನ್ ಗಳಿಸಿದ ನಂತರ ಭಾರತ 311 ರನ್‌ಗಳ ಬೃಹತ್ ಹಿನ್ನಡೆಯನ್ನು ಎದುರಿಸಿತು. ಆದರೆ, 5ನೇ ಕ್ರಮಾಂಕದಲ್ಲಿ ಸುಂದರ್ (101*), 6 ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ (107*), ನಾಯಕ ಶುಭ್‌ಮನ್ ಗಿಲ್ (103) ಮತ್ತು ಕೆಎಲ್ ರಾಹುಲ್ ಅವರ 90 ರನ್‌ಗಳು ತಂಡವನ್ನು ಮುನ್ನಡೆಸಿತು. ಒಂದು ಟೆಸ್ಟ್ ಬಾಕಿ ಇರುವಾಗ ಭಾರತ ಸರಣಿಯನ್ನು ಜೀವಂತವಾಗಿರಿಸಿಕೊಂಡಿತು. ಮೊದಲ ನಾಲ್ಕು ಟೆಸ್ಟ್‌ಗಳ ನಂತರ ಭಾರತವು ಇಂಗ್ಲೆಂಡ್‌ನಲ್ಲಿ 1-2 ಅಂತರದಿಂದ ಹಿನ್ನಡೆ ಸಾಧಿಸಿದೆ.

ಮಗನ ಅದ್ಭುತ ಪ್ರದರ್ಶನದ ನಂತರ, ವಾಷಿಂಗ್ಟನ್ ಸುಂದರ್ ಅವರ ತಂದೆ ಎಂ. ಸುಂದರ್ ಅವರು ಬಿಸಿಸಿಐ ಆಯ್ಕೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಮಗನಿಗೆ ನಿಯಮಿತ ಅವಕಾಶಗಳನ್ನು ನೀಡದಿದ್ದಕ್ಕಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 25 ವರ್ಷದ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 2017 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು ಮತ್ತು ಅಂದಿನಿಂದ 12 ಟೆಸ್ಟ್, 23 ಏಕದಿನ ಮತ್ತು 54 ಟಿ20 ಪಂದ್ಯಗಳನ್ನು ಆಡಿದ್ದಾರೆ.

'ವಾಷಿಂಗ್ಟನ್ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದಾಗ್ಯೂ, ಜನರು ಅವರ ಪ್ರದರ್ಶನವನ್ನು ಮರೆತುಬಿಡುತ್ತಾರೆ. ಇತರ ಆಟಗಾರರಿಗೆ ನಿಯಮಿತವಾಗಿ ಅವಕಾಶಗಳು ಸಿಗುತ್ತವೆ. ಆದರೆ, ನನ್ನ ಮಗನಿಗೆ ಮಾತ್ರ ತಂಡದಲ್ಲಿ ಸ್ಥಾನ ಸಿಗುವುದಿಲ್ಲ. ನಾಲ್ಕನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಮಾಡಿದಂತೆ ವಾಷಿಂಗ್ಟನ್ ಐದನೇ ಕ್ರಮಾಂಕದಲ್ಲಿ ನಿರಂತರವಾಗಿ ಬ್ಯಾಟಿಂಗ್ ಮಾಡಬೇಕು ಮತ್ತು ಸತತ ಐದರಿಂದ ಹತ್ತು ಅವಕಾಶಗಳನ್ನು ಪಡೆಯಬೇಕು. ಆಶ್ಚರ್ಯ ಎಂದರೆ, ನನ್ನ ಮಗನನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಆಯ್ಕೆ ಮಾಡಿರಲಿಲ್ಲ' ಎಂದು ಕ್ರಿಕೆಟಿಗನ ತಂದೆ ಎಂ ಸುಂದರ್ TOI ಗೆ ತಿಳಿಸಿದ್ದಾರೆ.

'ನನ್ನ ಮಗ ಕೇವಲ ಒಂದು ಅಥವಾ ಎರಡು ಪಂದ್ಯಗಳಲ್ಲಿ ವಿಫಲನಾಗಿದ್ದರೂ ಸಹ ಅವನನ್ನು ಕೈಬಿಡಲಾಗುತ್ತದೆ. ಇದು ನ್ಯಾಯೋಚಿತವಲ್ಲ. ವಾಷಿಂಗ್ಟನ್ 2021 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಜೇಯ 85 ರನ್ ಮತ್ತು ಅದೇ ವರ್ಷ ಅಹಮದಾಬಾದ್‌ನಲ್ಲಿ ಅದೇ ಎದುರಾಳಿಯ ವಿರುದ್ಧ 96* ರನ್ ಗಳಿಸಿದರು. ಆ ಎರಡು ಇನಿಂಗ್ಸ್‌ಗಳು ಶತಕಗಳ ಸನಿಹ ಕೊನೆಗೊಂಡಿದ್ದರೂ ಸಹ ಅವನನ್ನು ತಂಡದಿಂದ ಕೈಬಿಡಲಾಗುತ್ತಿತ್ತು' ಎಂದು ದೂರಿದರು.

'ಈ ರೀತಿಯ ಮನೋಭಾವವನ್ನು ಬೇರೆ ಯಾವುದೇ ಭಾರತೀಯ ಕ್ರಿಕೆಟಿಗನ ವಿಚಾರದಲ್ಲಿ ಕಾಯ್ದುಕೊಳ್ಳಲಾಗಿದೆಯೇ? ಇದೆಲ್ಲದರ ನಂತರವೂ ಆತ ತುಂಬಾ ಬಲಿಷ್ಠನಾಗಿದ್ದಾನೆ ಮತ್ತು ಅದರ ಫಲಿತಾಂಶವೇ ಜನರು ಈಗ ನೋಡುತ್ತಿರುವ ಪ್ರದರ್ಶನ' ಎಂದು ಅವರು ಹೇಳಿದರು.

2018 ರ ನಿದಹಾಸ್ ಟ್ರೋಫಿಯಲ್ಲಿ ತಮ್ಮ ಮಗ ವಾಷಿಂಗ್ಟನ್ ಸುಂದರ್ ಎಂಟು ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದಿದ್ದರು ಎಂದು ತಿಳಿಸಿದರು.

'ಮೊದಲ ವಿದೇಶ ಪ್ರವಾಸವಾಗಿದ್ದರೂ ಸಹ ನನ್ನ ಮಗ ತುಂಬಾ ಎಕನಾಮಿಕಲ್ ಆಗಿ ಬೌಲಿಂಗ್ ಮಾಡಿದ. ಆತನ ಗುಣಮಟ್ಟದ ಪ್ರದರ್ಶನದ ಹೊರತಾಗಿಯೂ ಬಳಿಕ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಯಿಂದ ಸತತ 11 ಪಂದ್ಯಗಳಿಗೆ ಆತನನ್ನು ಕೈಬಿಡಲಾಯಿತು. ಅವನ ಮನಸ್ಥಿತಿ ಏನಾಗಿತ್ತು ಎಂದು ನೀವು ಊಹಿಸಬಲ್ಲಿರಾ? ಐಪಿಎಲ್ 2022ರ ಆವೃತ್ತಿಯಲ್ಲಿ ಎಸ್‌ಆರ್‌ಹೆಚ್ ಪರ ತನ್ನ ಮೊದಲ ಪಂದ್ಯದಲ್ಲಿ ವಾಷಿಂಗ್ಟನ್ 14 ಎಸೆತಗಳಲ್ಲಿ 40 ರನ್ ಗಳಿಸಿದನು. ಮುಂದಿನ ಪಂದ್ಯದಲ್ಲಿ ಅವನನ್ನು ಆರನೇ ಸ್ಥಾನದಲ್ಲಿ ಕಳುಹಿಸಲಾಯಿತು' ಎಂದು ಅವರು ಹೇಳಿದರು.

'ಆತ ಇರುವ ಸದ್ಯದ ತಂಡ (ಗುಜರಾತ್ ಟೈಟಾನ್ಸ್) ಕೂಡ ಆತನಿಗೆ ನಿಯಮಿತ ಅವಕಾಶಗಳನ್ನು ನೀಡುತ್ತಿಲ್ಲ. ಅವನು ಐಪಿಎಲ್ 2025ನೇ ಆವೃತ್ತಿಯ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧ 24 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದನು. ಯಶಸ್ವಿ ಜೈಸ್ವಾಲ್ ಅವರನ್ನು ಆರ್‌ಆರ್ ಬೆಂಬಲಿಸಿದ ರೀತಿಯನ್ನು ನೋಡಿ. ವಾಷಿಂಗ್ಟನ್ ಸುಂದರ್ ದೇಶೀಯ ಕ್ರಿಕೆಟ್‌ನಲ್ಲಿಯೂ ಸಹ ನಿಯಮಿತವಾಗಿ ಅವಕಾಶಗಳನ್ನು ಪಡೆದಿಲ್ಲ' ಎಂದು ನೋವು ತೋಡಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT