ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯ Qualifier 2 ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮುಂಬೈ ಇಂಡಿಯನ್ಸ್ 204 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ Qualifier 2 ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಅದರಂತೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡ ಸೂರ್ಯ ಕುಮಾರ್ ಯಾದವ್ (44 ರನ್) ಮತ್ತು ತಿಲಕ್ ವರ್ಮಾ (44 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 203 ರನ್ ಪೇರಿಸಿತು.
ಆ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 204ರನ್ ಗಳ ಬೃಹತ್ ಗುರಿ ನೀಡಿತು.
ರೋಹಿತ್ ಶರ್ಮಾ ನಿರಾಶೆ
ಇನ್ನು ಈ ಪಂದ್ಯದಲ್ಲಿ ಮುಂಬೈ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಕೇವಲ 8 ರನ್ ಗಳಿಸಿ ಸ್ಟಾಯ್ನಿಸ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ತಿಲಕ್ ವರ್ಮಾ ಜೊತೆಗೂಡಿದ ಜಾನಿ ಬೇರ್ ಸ್ಟೋ 51 ರನ್ ಗಳ ಅಮೋಘ ಜೊತೆಯಾಟವಾಡಿದರು. ಈ ಹಂತದಲ್ಲಿ 38 ರನ್ ಗಳಿಸಿದ್ದ ಬೇರ್ ಸ್ಚೋ ವಿಜಯ್ ಕುಮಾರ್ ವೈಶಾಖ್ ಬೌಲಿಂಗ್ ನಲ್ಲಿ ಔಟಾದರು.
ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ ಭರ್ಜರಿ ಜೊತೆಯಾಟ
ಜಾನಿ ಬೇರ್ ಸ್ಟೋ ಬಳಿಕ ಜೊತೆಗೂಡಿದ ತಿಲಕ್ ವರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ಜೋಡಿ 3ನೇ ವಿಕೆಟ್ ಗೆ 72 ರನ್ ಗಳ ಅಮೋಘ ಜೊತೆಯಾಟ ನೀಡಿದರು.
ತಿಲಕ್ ವರ್ಮಾ 44ರನ್ ಗಳಿಸಿ ಜೇಮಿಸನ್ ಗೆ ವಿಕೆಟ್ ಒಪ್ಪಿಸಿದರೆ, ಸೂರ್ಯ ಕುಮಾರ್ ಯಾದವ್ ಕೂಡ 44 ರನ್ ಗಳಿಸಿ ಚಹಲ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ನಾಯಕ ಹಾರ್ದಿಕ್ ಪಾಂಡ್ಯ 15 ರನ್ ಗಳಿಸಿ ಔಟಾದರೆ, ಅಂತಿಮ ಹಂತದಲ್ಲಿ ನಮನ್ ಧೀರ್ 37 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.
ಇನ್ನು ಪಂಜಾಬ್ ಪರ ಅಜ್ಮತುಲ್ಲಾ 2 ವಿಕೆಟ್ ಪಡೆದರೆ, ಜೇಮಿಸನ್, ಸ್ಟಾಯ್ನಿಸ್, ವಿಜಯ್ ಕುಮಾರ್ ವೈಶಾಕ್ ಮತ್ತು ಚಹಲ್ ತಲಾ 1 ವಿಕೆಟ್ ಪಡೆದರು.