ಶ್ರೇಯಸ್ ಅಯ್ಯರ್ ಮತ್ತು ತಂಡ 
ಕ್ರಿಕೆಟ್

IPL 2025: ಐತಿಹಾಸಿಕ ಚೇಸ್, Shreyas Iyer ಆರ್ಭಟಕ್ಕೆ ಬಿದ್ದುಹೋಗಿದ್ದು ಎಷ್ಟು ದಾಖಲೆಗಳು ಗೊತ್ತಾ?

Qualifier 2 ಪಂದ್ಯದಲ್ಲಿ ಮುಂಬೈ ನೀಡಿದ್ದ 204 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿ 5 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು.

ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯ Qualifier 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಐತಿಹಾಸಿಕ ಜಯ ಸಾಧಿಸಿದ್ದು, ನಾಯಕ ಶ್ರೇಯಸ್ ಅಯ್ಯರ್ ಆರ್ಭಟಕ್ಕೆ ಐಪಿಎಲ್ ಇತಿಹಾಸದ ಹಲವು ದಾಖಲೆಗಳು ಪತನವಾಗಿದೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ Qualifier 2 ಪಂದ್ಯದಲ್ಲಿ ಮುಂಬೈ ನೀಡಿದ್ದ 204 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿ 5 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು. ಆ ಮೂಲಕ ಮುಂಬೈ ತಂಡ ಪ್ರಶಸ್ತಿ ರೇಸ್ ನಿಂದ ಹೊರಬಿದ್ದಿದೆ.

ಶ್ರೇಯಸ್ ಅಯ್ಯರ್ ಆರ್ಭಟ

ಇನ್ನು ಈ ಪಂದ್ಯದಲ್ಲಿ ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 41 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ ಬರೊಬ್ಬರಿ 8 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಬರೊಬ್ಬರಿ ಅಜೇಯ 87 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಪ್ರಮುಖವಾಗಿ ಪಂದ್ಯದಲ್ಲಿ ಮುಂಬೈ ವೇಗಿ ಜಸ್ ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಅಯ್ಯರ್ ಪ್ರದರ್ಶಿಸಿದ ಕೆಚ್ಚೆದೆಯ ಬ್ಯಾಟಿಂಗ್ ಇಡೀ ಪಂದ್ಯದ ಗತಿಯನ್ನೇ ಬದಲಿಸಿತು. ಬುಮ್ರಾ ಎಸೆದ ಮಾರಕ ಯಾರ್ಕರ್ ಗಳನ್ನು ಶ್ರೇಯಸ್ ಅಯ್ಯರ್ ಅತ್ಯಂತ ಚಾಕಚಕ್ಯತೆಯಿಂದ ಬೌಂಡರಿಗೆ ಅಟ್ಟಿದರು.

ರೋಹಿತ್ ಶರ್ಮಾ, MS ಧೋನಿ ಮಾಡಲಾಗದ್ದನ್ನು ಮಾಡಿ ತೋರಿಸಿದ ಅಯ್ಯರ್

ಇನ್ನು ಐಪಿಎಲ್ ನ ಈ ವರೆಗಿನ 18 ಆವೃತ್ತಿಗಳಲ್ಲಿ ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಪ್ರತಿನಿಧಿಸಿರುವ ತಂಡಗಳೇ ಅತೀ ಹೆಚ್ಚು ಬಾರಿ ಪ್ರಶಸ್ತಿ ಗಳಿಸಿ ಐಪಿಎಲ್ ನಲ್ಲಿ ತಮ್ಮ ಪ್ರಾಬಲ್ಯ ತೋರಿವೆ. ಇಂತಹ ಘಟಾನುಘಟಿ ನಾಯಕರ ನಡುವೆ ಶ್ರೇಯಸ್ ಅಯ್ಯರ್ ಕೇವಲ 6 ವರ್ಷಗಳಲ್ಲಿ 3 ವಿವಿಧ ತಂಡಗಳಲ್ಲಿ ಆಡಿ ಮೂರೂ ತಂಡಗಳನ್ನು ಟೂರ್ನಿಯ ಫೈನಲ್ ಹಂತಕ್ಕೆ ಕರೆತಂದಿದ್ದಾರೆ. ಈ ಪೈಕಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು. ಆ ಮೂಲಕ 3 ತಂಡಗಳನ್ನು ಫೈನಲ್ ಗೆ ತಂದ ಕೀರ್ತಿ ಶ್ರೇಯಸ್ ಅಯ್ಯರ್ ಅವರಿಗೆ ಸಲ್ಲುತ್ತದೆ.

ಐಪಿಎಲ್ ಇತಿಹಾಸದಲ್ಲೇ ನಾಕೌಟ್ ಹಂತದ ಗರಿಷ್ಠ ರನ್ ಚೇಸ್

ನಿನ್ನೆ ಮುಂಬೈ ನೀಡಿದ್ದ 204 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದ ಪಂಜಾಬ್ ತಂಡ ಆ ಮೂಲಕ ಐಪಿಎಲ್ ಇತಿಹಾಸದ ನಾಕೌಟ್ ಹಂತದ ಗರಿಷ್ಠ ರನ್ ಚೇಸ್ ಆಗಿದೆ. ಇದಕ್ಕೂ ಮೊದಲು 2014ರ ಐಪಿಎಲ್ ಟೂರ್ನಿಯ ಫೈನಲ್ ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 200 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಆ ಬಳಿಕ ಯಾವುದೇ ತಂಡ ಐಪಿಎಲ್ ಪ್ಲೇಆಫ್ ನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳನ್ನು ಚೇಸ್ ಮಾಡಿರಲಿಲ್ಲ.

ಮುಂಬೈ ವಿರುದ್ಧ 200ಕ್ಕಿಂತ ಹೆಚ್ಚಿನ ರನ್ ಚೇಸ್ ಮಾಡಿ ಗೆದ್ದ ಮೊದಲ ತಂಡ ಪಂಜಾಬ್

ಇನ್ನು ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 200ಕ್ಕಿಂತ ಹೆಚ್ಚಿನ ರನ್ ಚೇಸ್ ಮಾಡಿ ಗೆದ್ದ ಮೊದಲ ತಂಡ ಎಂಬ ಕೀರ್ತಿಗೆ ಪಂಜಾಬ್ ಪಾತ್ರವಾಗಿದೆ. ಈ ಹಿಂದೆ 2020ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡ ಮುಂಬೈ ವಿರುದ್ಧ 196 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಆ ಬಳಿಕ ಮುಂಬೈ 200ಕ್ಕಿಂತ ಹೆಚ್ಚು ರನ್ ಗಳಿಸಿದಾಗಲೆಲ್ಲಾ ಗೆದ್ದು ಬೀಗಿತ್ತು. ಇದೀಗ ಮುಂಬೈನ ಈ ಗರ್ವಕ್ಕೆ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಭಂಗ ತಂದಿದ್ದಾರೆ.

ಐಪಿಎಲ್ ಪ್ಲೇ ಆಫ್ ನಲ್ಲಿ ನಾಯಕನಾಗಿ ಅತೀ ಹೆಚ್ಚು ಬಾರಿ 50+ ರನ್, ಶ್ರೇಯಸ್ ಅಯ್ಯರ್ ದಾಖಲೆ

ಇದೇ ವೇಳೆ ಶ್ರೇಯಸ್ ಅಯ್ಯರ್ ಐಪಿಎಲ್ ಪ್ಲೇ ಆಫ್ ನಲ್ಲಿ ನಾಯಕನಾಗಿ ಅತೀ ಹೆಚ್ಚು ಬಾರಿ 50ಕ್ಕಿಂತ ಅಧಿಕ ರನ್ ಗಳಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ನಿನ್ನೆಯ ಪಂದ್ಯದ ಬ್ಯಾಟಿಂಗ್ ನೊಂದಿಗೆ ಶ್ರೇಯಸ್ ಅಯ್ಯರ್ ನಾಯಕನಾದಿ ಪ್ಲೇಆಫ್ ನಲ್ಲಿ ಒಟ್ಟು 3 ಬಾರಿ 50ಕ್ಕಿಂತ ಅಧಿಕ ರನ್ ಗಳಿಸಿದ್ದಾರೆ. ಆ ಮೂಲಕ ಅಯ್ಯರ್ ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿ ಐಪಿಎಲ್ ಪ್ಲೇಆಫ್‌ನಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದ ಮೊದಲ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಐಪಿಎಲ್ ಫೈನಲ್‌ಗೆ 3 ವಿಭಿನ್ನ ತಂಡಗಳನ್ನು ಮುನ್ನಡೆಸಿದ ಮೊದಲ ನಾಯಕ

ಪಂಜಾಬ್ ತಂಡವು ಮುಂಬೈ ವಿರುದ್ಧ ಜಯಗಳಿಸಿದ ನಂತರ ಶ್ರೇಯಸ್ ಅಯ್ಯರ್ ಐತಿಹಾಸಿಕ ಸಾಧನೆ ಮಾಡಿದರು. ಐಪಿಎಲ್ ಫೈನಲ್‌ಗೆ ಮೂರು ವಿಭಿನ್ನ ತಂಡಗಳನ್ನು ಮುನ್ನಡೆಸಿದ ಮೊದಲ ನಾಯಕ ಎಂಬ ಕೀರ್ತಿಗೆ ಭಾಜನರಾದರು. ಅಯ್ಯರ್ ಕಳೆದ ಋತುವಿನಲ್ಲಿ ಕೆಕೆಆರ್ ಗೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಪಿಎಲ್ 2020 ಫೈನಲ್‌ಗೆ ಮುನ್ನಡೆಸಿದ್ದರು. ಇದೀಗ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ಹಂತಕ್ಕೆ ಮುನ್ನಡೆಸಿದ್ದಾರೆ. ಅಂತೆಯೇ ನಾಳೆ ನಡೆಯಲಿರುವ ಫೈನಲ್ ನಲ್ಲಿ ಗೆದ್ದರೆ ಎರಡು ವಿಭಿನ್ನ ಫ್ರಾಂಚೈಸಿಗಳೊಂದಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದ ಮೊದಲ ನಾಯಕ ಎಂಬ ಕೀರ್ತಿಗೂ ಭಾಜನರಾಗಲಿದ್ದಾರೆ.

ಒಂದೇ ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ 200ಕ್ಕೂ ಅಧಿಕ ರನ್ ಚೇಸ್ ಮಾಡಿದ ತಂಡ ಪಂಜಾಬ್

ಮುಂಬೈ ವಿರುದ್ಧ 204 ರನ್‌ಗಳ ಚೇಸಿಂಗ್ ಮೂಲಕ ಪಂಜಾಬ್ ತಂಡ ಮತ್ತೊಂದು ದಾಖಲೆ ನಿರ್ಮಿಸಿದ್ದು, ಇದು ಹಾಲಿ ಟೂರ್ನಿಯಲ್ಲಿ ಪಂಜಾಬ್ ತಂಡ 8ನೇ ಬಾರಿಗೆ 200ಕ್ಕೂ ಅಧಿಕ ರನ್ ಚೇಸ್ ಮಾಡಿದ ದಾಖಲೆ ಮಾಡಿದೆ. ಇದು ಟಿ20 ಟೂರ್ನಮೆಂಟ್‌ನ ಆವೃತ್ತಿಯಲ್ಲಿ ಅತೀ ಹೆಚ್ಚು ಬಾರಿ 200ಕ್ಕಿಂತ ಹೆಚ್ಚು ರನ್ ಚೇಸ್ ಮಾಡಿ ಗೆದ್ದ ತಂಡ ಎಂಬ ಕೀರ್ತಿಗೆ ಪಂಜಾಬ್ ಪಾತ್ರವಾಗಿದೆ. ಇದೇ ವೇಳೆ ಹಾಲಿ ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ಎಂಟು ಬಾರಿ 200 ಕ್ಕೂ ಹೆಚ್ಚು ಮೊತ್ತಗಳನ್ನು ಗಳಿಸಿದ ತಂಡವಾದರೆ, ಪಂಜಾಬ್ ಆ ತಂಡದ ದಾಖಲೆ ಸರಿಗಟ್ಟಿದ್ದು ಮಾತ್ರವಲ್ಲದೇ ಒಂದು ಆವೃತ್ತಿಯಲ್ಲಿ ಎಂಟು ಬಾರಿ 200 ಕ್ಕೂ ಹೆಚ್ಚು ಮೊತ್ತಗಳನ್ನು ಬೆನ್ನಟ್ಟಿದ ಇತಿಹಾಸದ ಮೊದಲ ಟಿ20 ತಂಡ ಎಂಬ ಕೀರ್ತಿಗೆ ಭಾಜನವಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT