ನವದೆಹಲಿ: ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದ ಪಂಜಾಬ್ ಕಿಂಗ್ಸ್ ಫೈನಲ್ ಗೆ ಲಗ್ಗೆ ಇಡುತ್ತಿದ್ದಂತೆಯೇ ತಂಡದ ಒಡತಿ ಪ್ರೀತಿ ಜಿಂಟಾ ಹಾಗೂ ಅಭಿಮಾನಿಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತು
ಮುಂಬೈ ನೀಡಿದ್ದ 204 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿ 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಫೈನಲ್‌ಗೆ ಪ್ರವೇಶ ಪಡೆದಿದೆ.
ತಂಡದ ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ ಐದು ಬೌಂಡರಿ ಹಾಗೂ 8 ಸಿಕ್ಸರ್ ಮೂಲಕ ಅಜೇಯ 87 ರನ್ ಸಿಡಿಸಿ ಈ ಗೆಲುವಿನ ರೂವಾರಿಯಾದರು. 2014ರ ಬಳಿಕ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ಐಪಿಎಲ್ ಫೈನಲ್‌ಗೆ ತಲುಪಿದೆ, ಜೂನ್ 3ರಂದು ಆರ್‌ಸಿಬಿ ವಿರುದ್ಧ ತಮ್ಮ ಮೊದಲ ಟ್ರೋಫಿಗಾಗಿ ಹೋರಾಡಲಿದೆ.
ಪಂದ್ಯ ಗೆಲುವಿನ ಬಳಿಕ ಪಂಜಾಬ್ ಕಿಂಗ್ಸ್‌ನ ಒಡತಿ ಪ್ರೀತಿ ಜಿಂಟಾ ಅವರ ಸಂಭ್ರಮಾಚರಣೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಂದ್ಯದ ವೇಳೆಸ್ಯಾಂಡ್ ನಲ್ಲಿ ಕೈಗಳನ್ನು ಎತ್ತಿ ಸಂಭ್ರಮಿಸಿದ ಮಾಜಿ ಬಾಲಿವುಡ್ ತಾರೆ, ಬಳಿಕ ಕ್ರೀಡಾಂಗಣಕ್ಕೆ ತೆರಳಿ ಶ್ರೇಯಸ್ ಅಯ್ಯರ್ ಮತ್ತು ಕೋಚ್ ರಿಕಿ ಪಾಂಟಿಂಗ್‌ರನ್ನು ಆಲಿಂಗಿಸಿ, ತಂಡದ ಗೆಲುವಿನ ಸಂತೋಷವನ್ನು ವ್ಯಕ್ತಪಡಿಸಿದರು.
ಈ ಮಧ್ಯೆ ಕಣ್ಣು ಹೊಡೆದಿದ್ದಾರೆ. ಆದರೆ ಯಾರಿಗೆ ಕಣ್ಣು ಹೊಡೆದದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಈ ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಈ ಸಂಭ್ರಮಾಚರಣೆ ಪಂಜಾಬ್ ಕಿಂಗ್ಸ್‌ನ ಗೆಲುವಿನ ಉತ್ಸಾಹವನ್ನು ಮತ್ತಷ್ಟು ಉತ್ತೇಜಿಸಿದೆ. ಜೂನ್ 3ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯಲಿರುವ ಫೈನಲ್‌ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಅಲ್ಲದೇ ಪಂಜಾಬ್ ಕಿಂಗ್ಸ್‌ನ ಮೊದಲ ಐಪಿಎಲ್ ಟ್ರೋಫಿಯ ಕನಸಿಗೆ ಬಲ ತುಂಬಿದೆ.