ಬೆಂಗಳೂರು: ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಈ ಸಲ ಕಪ್ ನಮ್ದೇ ಎಂದು ಗೆದ್ದು ಬೀಗಿದೆ.
ತನ್ಮೂಲಕ ಮೊದಲ ಬಾರಿಗೆ ಬೆಂಗಳೂರು ತಂಡ ಐಪಿಎಲ್ ಕಪ್'ನ್ನು ಗೆದ್ದುಕೊಂಡಿದೆ. ಆರ್'ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಪಂಜಾಬ್ ತಂಡ 184 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಈ ಮೂಲಕ ಕಳೆದ 18 ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ 18 ಆವೃತ್ತಿಯ ಐಪಿಎಲ್ ನಲ್ಲಿ 6 ರನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು. ಇದರೊಂದಿಗೆ ಕೋಟಿ ಕೋಟಿ ಕನ್ನಡಿಗರ ಕನಸನ್ನು ನನಸಾಗಿಸಿದೆ.
ಈ ನಡುವೆ ಐಪಿಎಲ್ 2025 ಚಾಂಪಿಯನ್ ಟ್ರೋಫಿಗೆ ಮುತ್ತಿಟ್ಟ ಆರ್'ಸಿಬಿ ತಂಡಕ್ಕೆ ರಾಜಕೀಯ ನಾಯಕರು, ಅಭಿಮಾನಿಗಳು, ಇತರೆ ಕ್ರೀಡಾ ತಂಡಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೆಕೆಆರ್ ತಂಡ, ಈ ಸಲ ಕಪ್ ನಿಮ್ದೇ, ಅಭಿನಂದನೆಗಳು ಆರ್'ಸಿಬಿ ಎಂದು ಹೇಳಿದೆ. ಚೆನ್ನೈ ಸೂಪರ್ ಕಿಂಗ್, ಮುಂಬೈ ಇಂಡಿಯನ್ಸ್ ಸೇರಿದಂತೆ ಇತರೆ ತಂಡಗಳೂ ಕೂಡ ಆರ್'ಸಿಬಿ ತಂಡಕ್ಕೆ ಶುಭಾಶಯಗಳನ್ನು ಕೋರಿವೆ.
ಇನ್ನು ಐಪಿಎಲ್ 2025 ಟ್ರೋಫಿ ಗೆದ್ದಿರುವ ಆರ್'ಸಿಬಿ ತಂಡ, ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದು, ಇಂದು ಬೆಂಗಳೂರಿಗೆ ಬರುತ್ತಿದೆ. ವಿಧಾನಸೌಧದಿಂದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಸಲಿದೆ. ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಿಸಲಿದೆ.