ಶುಕ್ರವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್, ಕನ್ನಡಿಗ ಕರುಣ್ ನಾಯರ್ ಅವರಿಗೆ ಗಾಯದ ಭೀತಿ ಎದುರಾಗಿದೆ. ನೆಟ್‌ನಲ್ಲಿ ಕನ್ನಡಿಗರೇ ಆದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರನ್ನು ಎದುರಿಸುತ್ತಿದ್ದಾಗ ಕರುಣ್ ಅವರ ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ನಂತರ ಸುಧಾರಿಸಿಕೊಂಡು ಮತ್ತೆ ಬ್ಯಾಟಿಂಗ್ ಆರಂಭಿಸಿದ್ದಾರೆ.
2017ರ ನಂತರ ಕರುಣ್ ನಾಯರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಇದೀಗ ಗಾಯದ ಭೀತಿ ಎದುರಾಗಿದೆ. ಕರುಣ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನ ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಈಮಧ್ಯೆ, ಬುಧವಾರ ಭಾರತ ವಿರುದ್ಧದ ಮೊದಲ ಟೆಸ್ಟ್‌ಗೆ ಆತಿಥೇಯರು ತಮ್ಮ ಆಡುವ XI ಅನ್ನು ಪ್ರಕಟಿಸಿದ್ದು, ಕ್ರಿಸ್ ವೋಕ್ಸ್ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಜೇಕಬ್ ಬೆಥೆಲ್ ಅವರನ್ನು ತಂಡದಿಂದ ಹೊರಗಿಟ್ಟಿದ್ದು, ಓಲ್ಲಿ ಪೋಪ್ ಅವರಿಗೆ ಆದ್ಯತೆ ನೀಡಲಾಗಿದೆ.
ಗಾಯದಿಂದಾಗಿ ಹಿಂದಿನ ಎರಡು ಟೆಸ್ಟ್‌ಗಳಿಂದ ಹೊರಗುಳಿದಿದ್ದ ವೋಕ್ಸ್, ಸ್ಯಾಮ್ ಕುಕ್ ಬದಲಿಗೆ ತಂಡಕ್ಕೆ ಆಯ್ಕೆಯಾದರೆ, ಮಂಡಿರಜ್ಜು ಸಮಸ್ಯೆಯಿಂದ ಹೊರಗುಳಿದಿರುವ ಗಸ್ ಅಟ್ಕಿನ್ಸನ್ ಬದಲಿಗೆ ಬ್ರೈಡನ್ ಕಾರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಎಂಟನೇ ಕ್ರಮಾಂಕದಲ್ಲಿ ವೋಕ್ಸ್ ಸೇರ್ಪಡೆಗೊಂಡಿರುವುದು ಇಂಗ್ಲೆಂಡ್ ತಂಡಕ್ಕೆ ಅಮೂಲ್ಯವಾದ ಆಲ್‌ರೌಂಡರ್ ಬಲವನ್ನು ನೀಡಿದೆ. ಆಳವಾದ ಬ್ಯಾಟಿಂಗ್ ಲೈನ್‌ಅಪ್ ಅನ್ನು ಕಾಯ್ದುಕೊಳ್ಳುವುದರ ಜೊತೆಗೆ ಜೇಮೀ ಸ್ಮಿತ್ ಅವರನ್ನು 7ನೇ ಕ್ರಮಾಂಕದಲ್ಲಿ ವಿಶೇಷ ವಿಕೆಟ್‌ಕೀಪರ್-ಬ್ಯಾಟರ್ ಆಗಿ ಕಣಕ್ಕಿಳಿಸಲು ಅವಕಾಶ ಮಾಡಿಕೊಟ್ಟಿದೆ.
ಆತಿಥೇಯರು ಉಪನಾಯಕ ಓಲಿ ಪೋಪ್ ಅವರನ್ನು ಮೂರನೇ ಸ್ಥಾನದಲ್ಲಿ ಹೆಸರಿಸಿದ್ದಾರೆ. 21 ವರ್ಷದ ಬೆಥೆಲ್ ಅವರನ್ನು ಹೊರಗಿಡಲಾಗಿದ್ದು, ಯುವ ಆಟಗಾರರಿಗಿಂತ ಅನುಭವಿಗಳನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಮೊದಲ ಟೆಸ್ಟ್‌ಗಾಗಿ ಇಂಗ್ಲೆಂಡ್ XI: ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಶ್ ಟಂಗ್ ಮತ್ತು ಶೋಯೆಬ್ ಬಶೀರ್.