ಲೀಡ್ಸ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನದಾಟದಲ್ಲಿ ಭರ್ಜರಿ ಮೇಲುಗೈ ಸಾಧಿಸಿದ್ದು, ಇದರ ನಡುವೆಯೇ ಟೀಂ ಇಂಡಿಯಾ ನಾಯಕ ಶುಭ್ ಮನ್ ಗಿಲ್ ಗೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿಚಿತ್ರ ಮನವಿ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿದ್ದು, ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.
ಭಾರತದ ಪರ ಯಶಸ್ವಿ ಜೈಸಾಲ್ ಮತ್ತು ನಾಯಕ ಶುಭ್ ಮನ್ ಗಿಲ್ ಶತಕ ಸಿಡಿಸಿದರೆ, ರಿಷಬ್ ಪಂತ್ ಅಜೇಯ 65 ರನ್ ಗಳಿಸಿ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸಾಯಿ ಸುದರ್ಶನ್ ಔಟಾದ ಬಳಿಕ ಕ್ರೀಸ್ ಗೆ ಆಗಮಿಸಿದ ನಾಯಕ ಶುಭ್ ಮನ್ ಗಿಲ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಭರ್ಜರಿ ಜೊತೆಯಾಟವಾಡಿದರು. ಈ ಜೋಡಿ 4ನೇ ವಿಕೆಟ್ ಗೆ 164 ಎಸೆತಗಳಲ್ಲಿ 129 ರನ್ ಗಳ ಅಮೋಘ ಜೊತೆಯಾಟವಾಡಿತು.
ಗಿಲ್ ಶತಕ ಸಿಡಿಸಿದರೆ, ಜೈಸ್ವಾಲ್ 101 ರನ್ ಗಳಿಸಿ ಔಟಾದರು. ಈ ನಡುವೆ ಮೈದಾನದಲ್ಲಿ ಗಿಲ್ ಮತ್ತು ಜೈಸ್ವಾಲ್ ನಡುವೆ ನಡೆದ ಸಂಭಾಷಣೆಯೊಂದು ವ್ಯಾಪಕ ವೈರಲ್ ಆಗುತ್ತಿದೆ.
ನನ್ನ ಅಭ್ಯಾಸ ಅದು.. ನೀವೇ ಜೋರಾಗಿ ಎಚ್ಚರಿಕೆ ನೀಡಿ
ಜೈಸ್ವಾಲ್ ಇಂಗ್ಲೆಂಡ್ ಫೀಲ್ಡರ್ ಗಳ ಕೈಗೆ ಚೆಂಡು ನೀಡಿ ಕ್ವಿಕ್ ಸಿಂಗಲ್ ಪಡೆಯಲು ಯತ್ನಿಸುತ್ತಿದ್ದರು. ಒಂದರೆಡು ಬಾರಿ ಇದನ್ನು ಸಹಿಸಿಕೊಂಡ ಗಿಲ್ ಇಂಗ್ಲೆಂಡ್ ನ ಕ್ರಿಸ್ ವೋಕ್ಸ್ ಬೌಲಿಂಗ್ ವೇಳೆ ಬಳಿಕ ಜೈಸ್ವಾಲ್ ಉದ್ದೇಶಿಸಿ ಅಪಾಯಕಾರಿ ಸಿಂಗಲ್ ಗಳು ಬೇಡ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಜೈಸ್ವಾಲ್, 'ದಯವಿಟ್ಟು ಅಪಾಯಕಾರಿ ಸಿಂಗಲ್ಸ್‌ಗಳಿಗೆ 'ಬೇಡ' (NO)ಎಂದು ಜೋರಾಗಿ ಹೇಳುತ್ತಿರಿ. ನನಗೆ ಚೆಂಡನ್ನು ಹೊಡೆದ ತಕ್ಷಣ ಓಡುವ ಅಭ್ಯಾಸವಿದೆ ಎಂದು ಹೇಳಿದ್ದಾರೆ. ಇದಕ್ಕೆ ಗಿಲ್ ಕೂಡ ನಗುತ್ತಲೇ ಓಕೆ ಎಂದು ಹೇಳಿರುವುದು ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಅಂದಹಾಗೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿದ್ದು, ಅಜೇಯ 127 ರನ್ ಗಳಿಸಿರುವ ನಾಯಕ ಶುಭ್ ಮನ್ ಗಿಲ್ ಮತ್ತು ಅಜೇಯ 65 ರನ್ ಗಳಿಸಿರುವ ರಿಷಬ್ ಪಂತ್ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ 2 ವಿಕೆಟ್ ಪಡೆದಿದ್ದರೆ, ಬ್ರೈಡನ್ ಕಾರ್ಸೆ 1 ವಿಕೆಟ್ ಪಡೆದಿದ್ದಾರೆ.