ಲೀಡ್ಸ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ನಿರ್ಣಾಯಕ ಹಂತದತ್ತ ದಾಪುಗಾಲಿರಿಸಿದ್ದು, ಭಾರತದ ಪರ 2ನೇ ಇನ್ನಿಂಗ್ಸ್ ನಲ್ಲೂ ಭರ್ಜರಿ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ (Rishabh Pant) ಅತ್ಯಪರೂಪದ ಸಾಧನೆ ಸೇರಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತ ತನ್ನ ಭರ್ಜರಿ ಬ್ಯಾಟಿಂಗ್ ಮುಂದವರೆಸಿದ್ದು, 4 ವಿಕೆಟ್ ನಷ್ಟಕ್ಕೆ 301 ರನ್ ಕಲೆಹಾಕಿದೆ. ಅಂತೆಯೇ ಒಟ್ಟಾರೆ 307 ರನ್ ಮುನ್ನಡೆ ಸಾಧಿಸಿದೆ. ಈ ಪೈಕಿ ಭಾರತದ ಪರ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಶತಕ ಸಿಡಿಸಿ ಭಾರತ ತಂಡದ ಬೃಹತ್ ಗುರಿಗೆ ನೆರವಾಗಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭ್ ಮನ್ ಗಿಲ್ ಒಂದಂಕಿ ಮೊತ್ತಕ್ಕೆ ಔಟಾಗಿ ನಿರಾಶೆ ಮೂಡಿಸಿದ್ದರು. ಒಂದು ಹಂತದಲ್ಲಿ ಭಾರತ ಕಳಪೆ ಮೊತ್ತಕ್ಕೆ ಆಲೌಟ್ ಆಗಬಹುದು ಎಂದು ಶಂಕಿಸಲಾಗಿತ್ತು.
ಆದರೆ ಈ ಹಂತದಲ್ಲಿ ಜೊತೆಗೂಡಿದ ಕೆಲ್ ರಾಹುಲ್ ಮತ್ತು ರಿಷಬ್ ಪಂತ್ ಜೋಡಿ 4ನೇ ವಿಕೆಟ್ ಗೆ 195 ರನ್ ಗಳ ಅಮೋಘ ಜೊತೆಯಾಟ ನೀಡಿತು. ಪಂತ್ 118 ರನ್ ಗಳಿಸಿ ಔಟಾದರೆ, ರಾಹುಲ್ ಅಜೇಯ 127 ರನ್ ಗಳಿಸಿ ಬ್ಯಾಟಿಂಗ್ ಮುಂದವೆರೆಸಿದ್ದಾರೆ.
ಪಂತ್ ಅಪರೂಪದ ದಾಖಲೆ
ಇನ್ನು 2ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸುವ ಮೂಲಕ ರಿಷಬ್ ಪಂತ್ ಅತ್ಯಪರೂಪದ ದಾಖಲೆ ನಿರ್ಮಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ ಶತಕ (134 ರನ್)ಗಳಿಸಿದ್ದ ಪಂತ್ 2ನೇ ಇನ್ನಿಂಗ್ಸ್ ನಲ್ಲೂ ಶತಕ (118 ರನ್) ಗಳಿಸಿದರು. ಆ ಮೂಲಕ ಇಂಗ್ಲೆಂಡ್ ನೆಲದಲ್ಲಿನ ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
ಅಂತೆಯೇ ಟೆಸ್ಟ್ ಪಂದ್ಯವೊಂದರಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ ಭಾರತದ 7ನೇ ಆಟಗಾರ ಎಂಬ ಕೀರ್ತಿಗೂ ಪಂತ್ ಭಾಜನರಾದರು. ಇದಕ್ಕೂ ಮೊದಲು ಭಾರತದ ಪರ ವಿಜಯ್ ಹಜಾರೆ, ಸುನಿಲ್ ಗವಾಸ್ಕರ್ (3 ಬಾರಿ), ರಾಹುಲ್ ದ್ರಾವಿಡ್ (2 ಬಾರಿ), ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಈ ಪಟ್ಟಿಗೆ ಇದೀಗ ಪಂತ್ ಸೇರ್ಪಡೆಯಾಗಿದ್ದಾರೆ.
Hundreds in each innings of a Test for India
Vijay Hazare
Sunil Gavaskar (3)
Rahul Dravid (2)
Virat Kohli
Ajinkya Rahane
Rohit Sharma
Rishabh Pant
ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ 2ನೇ ವಿಕೆಟ್ ಕೀಪರ್ ಬ್ಯಾಟರ್ ಆಟಗಾರ
ಇದೇ ವೇಳೆ ಟೆಸ್ಟ್ ಪಂದ್ಯವೊಂದರ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ 2ನೇ ವಿಕೆಟ್ ಕೀಪರ್ ಬ್ಯಾಟರ್ ಎಂಬ ಕೀರ್ತಿಗೂ ರಿಷಬ್ ಪಂತ್ ಭಾಜನರಾಗಿದ್ದು, ಈ ಹಿಂದೆ 2001ರಲ್ಲಿ ಜಿಂಬಾಬ್ವೆ ವಿಕೆಟ್ ಕೀಪರ್ ಬ್ಯಾಟರ್ ಆ್ಯಂಡಿ ಫ್ಲವರ್ ಈ ಸಾಧನೆ ಮಾಡಿದ್ದರು. 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹರಾರೆ ಟೆಸ್ಟ್ ಪಂದ್ಯದಲ್ಲಿ ಆ್ಯಂಡಿ ಫ್ಲವರ್ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ (142 & 199*) ಸಿಡಿಸಿದ್ದರು.
Hundreds in each innings by a designated wicketkeeper
Andy Flower 142 & 199* vs SA Harare 2001
Rishabh Pant 134 & 100* vs Eng Headingley 2025