ನವೆಂಬರ್ 19 ರಂದು ನಡೆಯಬೇಕಿದ್ದ ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ವಿವಾಹವನ್ನು ಇದೀಗ ಮುಂದೂಡಲಾಗಿದೆ ಎಂದು ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಗಣ್ಯರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಎಸ್‌ಪಿ ಅಧ್ಯಕ್ಷ ಮತ್ತು ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ನಟಿ ಜಯಾ ಬಚ್ಚನ್ ಮತ್ತು ಭಾರತೀಯ ವೇಗಿ ಭುವನೇಶ್ವರ್ ಕುಮಾರ್ ಭಾಗವಹಿಸಿದ್ದರು.
ಅಮರ್ ಉಜಾಲ ಪತ್ರಿಕೆಯ ವರದಿ ಪ್ರಕಾರ, ಕ್ರಿಕೆಟ್ ಪಂದ್ಯಗಳ ಕಾರಣದಿಂದಾಗಿ ನವೆಂಬರ್‌ನಲ್ಲಿ ನಡೆಯಬೇಕಿದ್ದ ರಿಂಕು ಮತ್ತು ಪ್ರಿಯಾ ಅವರ ವಿವಾಹವನ್ನು ಮುಂದೂಡಲಾಗಿದೆ.
ಮದುವೆ ಈಗ 2026ರ ಫೆಬ್ರುವರಿಯಲ್ಲಿ ನಡೆಯಲಿದ್ದು, ನಿಖರವಾದ ದಿನಾಂಕವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಕುಟುಂಬ ಸದಸ್ಯರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
'ರಿಂಕು ಮತ್ತು ಪ್ರಿಯಾ ಅವರ ಮದುವೆಯನ್ನು ನವೆಂಬರ್ 19 ರಂದು ವಾರಣಾಸಿಯ ತಾಜ್ ಹೋಟೆಲ್‌ನಲ್ಲಿ ನಡೆಸಲು ಕುಟುಂಬ ನಿರ್ಧರಿಸಿತ್ತು. ಈಗಾಗಲೇ ಹೋಟೆಲ್ ಅನ್ನು ಬುಕ್ ಮಾಡಲಾಗಿತ್ತು. ಆದರೆ, ಭಾರತೀಯ ಕ್ರಿಕೆಟ್ ತಂಡಕ್ಕಾಗಿ ರಿಂಕು ಅವರ ಬದ್ಧತೆಗಳು ಮದುವೆಯನ್ನು ಮುಂದೂಡಲು ಕಾರಣವಾಗಿದೆ' ಎಂದು ವರದಿ ತಿಳಿಸಿದೆ.
'ಹೋಟೆಲ್ ಅನ್ನು ಈಗ ಫೆಬ್ರುವರಿ ಅಂತ್ಯಕ್ಕೆ ಬುಕ್ ಮಾಡಲಾಗಿದೆ. ಆದರೆ, ನಿಖರವಾದ ದಿನಾಂಕವನ್ನು ಇನ್ನೂ ದೃಢಪಡಿಸಲಾಗಿಲ್ಲ' ಎನ್ನಲಾಗಿದೆ.
ಜೂನ್ 8 ರಂದು, ದಂಪತಿ ಲಕ್ನೋದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದಂಪತಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಮಾರಂಭದ ಅನೇಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.