ಕರಾಚಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಸೋಲಿಸುತ್ತೇವೆ ಎಂದು ಬೀಗುತ್ತಿದ್ದ ಕ್ರಿಕೆಟ್ ಜನಕ ಇಂಗ್ಲೆಂಡ್ ಮತ್ತೊಮ್ಮೆ ಹೀನಾಯ ಮುಖಭಂಗವಾಗಿದ್ದು, ಹಾಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೂ ಗೆಲವು ಕಾಣದೇ ಟೂರ್ನಿಯಿಂದಲೇ ಹೊರಬಿದ್ದಿದೆ.
ಹೌದು.. ಭಾರತದಲ್ಲಿ ನಡೆದ ಏಕದಿನ ಟೂರ್ನಿಯಲ್ಲಿ 3-0 ಅಂತರದಲ್ಲಿ ವೈಟ್ ವಾಶ್ ಆಗಿದ್ದ ಇಂಗ್ಲೆಂಡ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿತ್ತು. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯ ಪ್ರದರ್ಶನ ತೋರಿ ಒಂದೇ ಒಂದು ಗೆಲುವೂ ಸಾಧಿಸಿದೇ ಇದೀಗ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ.
ಇಂದು ಕರಾಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ತನ್ನ ಅಂತಿಮ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ 7 ವಿಕೆಟ್ ಅಂತರದಲ್ಲಿ ಹೀನಾಯವಾಗಿ ಸೋತು ತವರಿನತ್ತ ಮುಖ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ 38.2 ಓವರ್ ನಲ್ಲಿ ಕೇವಲ 179 ರನ್ ಗಳಿಗೇ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೋರೂಟ್ (37 ರನ್)ರನ್ನು ಹೊರತು ಪಡಿಸಿದರೆ ಉಳಿದಾವ ಆಟಗಾರನಿಂದಲೂ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ.
ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಗೆ ತತ್ತರಿಸಿ ಇಂಗ್ಲೆಂಡ್ 38.2 ಓವರ್ ನಲ್ಲಿ 179 ರನ್ ಗಳಿಗೇ ಆಲೌಟ್ ಆಯಿತು. ಈ ಅಲ್ಪ ಮೊತ್ತವನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 29.1 ಓವರ್ ನಲ್ಲೇ ಕೇವಲ 3 ವಿಕೆಟ್ ನಷ್ಟಕ್ಕೆ 181 ರನ್ ಪೇರಿಸಿ 7 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು. ಈ ಪಂದ್ಯದ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅಧಿಕೃತವಾಗಿ ಸೆಮೀಸ್ ಹಂತಕ್ಕೇರಿದೆ.
ಈಗಾಗಲೇ ಗ್ರೂಪ್ ಎ ನಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮೀಸ್ ಪ್ರವೇಶಿಸಿದ್ದು, ಗ್ರೂಪ್ ಬಿ ನಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳು ಅರ್ಹತೆ ಪಡೆದಿವೆ.
ಆಫ್ಘಾನಿಸ್ತಾನ ಕನಸು ನುಚ್ಚುನೂರು
ಇನ್ನು ಹಾಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಇಂಗ್ಲೆಂಡ್ ತಂಡವನ್ನು ಮಣಿಸಿದ್ದ ಆಫ್ಘಾನಿಸ್ತಾನ ಸೆಮೀಸ್ ಕನಸು ಕಾಣುತ್ತಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದರೆ, ನೆಟ್ ರನ್ ರೇಟ್ ಆಧಾರದಲ್ಲಿ ಆಫ್ಘಾನಿಸ್ತಾನ 2ನೇ ಸ್ಥಾನಕ್ಕೇರಿ ಸೆಮೀಸ್ ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಇಂಗ್ಲೆಂಡ್ ಹೀನಾಯವಾಗಿ ಸೋಲುವುದರೊಂದಿಗೆ ಆಫ್ಘಾನಿಸ್ತಾನದ ಸೆಮೀಸ್ ಕನಸು ಕೂಡ ನುಚ್ಚು ನೂರಾಗಿದೆ.
ಇನ್ನು ಟೂರ್ನಿ ಆರಂಭದಿಂದಲೂ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ದಕ್ಷಿಣ ಆಫ್ರಿಕಾ ಅರ್ಹವಾಗಿಯೇ ಸೆಮೀಸ್ ಹಂತಕ್ಕೇರಿದೆ.