ಲಾಹೋರ್: ಈ ಹಿಂದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಶುಭ್ ಮನ್ ಗಿಲ್ ರನ್ನು ಔಟ್ ಮಾಡಿ ಕಣ್ಸನ್ನೆ ಮೂಲಕ ವ್ಯಂಗ್ಯ ಮಾಡಿದ್ದ ಪಾಕಿಸ್ತಾನ ಬೌಲರ್ Abrar Ahmed ಇದೀಗ ಇನ್ ಸ್ಟಾಗ್ರಾಮ್ ಪೋಸ್ಟ್ ಮೂಲಕ ಭಾರತದ ವಾಯುಸೇನಾ ಯೋಧ ಅಭಿನಂದನ್ ವರ್ಧಮಾನ್ ರನ್ನು ಕೆಣಕುವ ಕೆಲಸ ಮಾಡಿದ್ದಾರೆ.
ಹೌದು.. ಪಾಕಿಸ್ತಾನಿ ಕ್ರಿಕೆಟಿಗ ಅಬ್ರಾರ್ ಅಹ್ಮದ್ ಮಾರ್ಚ್ 1, 2025 ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ "ಅದ್ಭುತ ಚಹಾ" ಎಂಬ ಶೀರ್ಷಿಕೆಯೊಂದಿಗೆ ಚಹಾ ಕಪ್ ಹಿಡಿದುಕೊಂಡು ಫೋಟೋ ಪೋಸ್ಟ್ ಮಾಡಿದ್ದು, ಈ ಫೋಟೋ ಮೂಲಕ ಅಬ್ರಾರ್ ಭಾರತದ ವಾಯುಸೇನಾ ಯೋಧ ಐಎಎಫ್ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಾರ್ಚ್ 1ರಂದು ಭಾರತದ ಯೋಧ ಅಭಿನಂದನ್ ವರ್ಧಮಾನ್ ರನ್ನು ಪಾಕಿಸ್ತಾನ ಬಿಡುಗಡೆ ಮಾಡುವಂತೆ ಭಾರತ ಸರ್ಕಾರ ಒತ್ತಾಯಿಸಿತ್ತು. ಈ ಘಟನೆಯ ವರ್ಷಾಚರಣೆಯ ವಿಚಾರವಾಗಿ ಭಾರತೀಯರನ್ನು ಕೆಣಕಲು ಅಬ್ರಾರ್ ಇಂತಹುದೊಂದು ಪೋಸ್ಟ್ ಹಾಕಿದರೇ ಎಂಬ ಅನುಮಾನ ಮೂಡುತ್ತಿದೆ.
ಭಾರತೀಯರ ಖಡಕ್ ತಿರುಗೇಟು
ಇನ್ನು ಅಬ್ರಾರ್ ಅಹ್ಮದ್ ಪೋಸ್ಟ್ ಗೆ ಭಾರತೀಯ ಸಾಮಾಜಿಕ ಬಳಕೆದಾರರು ಖಡಕ್ ತಿರುಗೇಟು ನೀಡಿದ್ದು, ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ನಿಯಾಜಿ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಈ ಹಿಂದೆ ಬಾಂಗ್ಲಾದೇಶ ವಿಮೋಚನೆ ವೇಳೆ ಭಾರತೀಯ ಸೈನಿಕರ ಹೊಡೆತಕ್ಕೆ ನಲುಗಿ ಹೋಗಿದ್ದ ಪಾಕಿಸ್ತಾನ ಸೇನೆ ಭಾರತೀಯ ಸೇನೆಯ ಎದುರು ಶರಣಾಗತಿ ಸ್ವೀಕರಿಸಿತ್ತು. ಅಂದು ಇದೇ ಜನರಲ್ ನಿಯಾಜಿ ಪಾಕಿಸ್ತಾನ ಸೇನೆಯ ಮುಖ್ಯಸ್ಥರಾಗಿದ್ದರು. ಅಂದು ಸುಮಾರು 93 ಸಾವಿರ ಪಾಕಿಸ್ತಾನ ಸೈನಿಕರು ಶರಣಾಗತಿಯಾಗಿದ್ದರು. ಅಂದು ನಿಯಾಜಿ ಚಹಾ ಸೇವಿಸುತ್ತಿರುವ ಫೋಟೋವನ್ನು ನೆಟ್ಟಿಗರು ಅಪ್ಲೋಡ್ ಮಾಡಿ ಅಬ್ರಾರ್ ಅಹ್ಮದ್ ಗೆ ತಿರುಗೇಟು ನೀಡಿದ್ದಾರೆ.