ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರನ್ನು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಟೀಕಿಸಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಕಳೆದ ರಾತ್ರಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಮಾರ್ಚ್ 9ರಂದು ನಡೆಯಲಿರುವ ಫೈನಲ್‌ಗೆ ಶುಭ ವಕ್ತಾರೆ ಶುಭ ಹಾರೈಸಿದ್ದಾರೆ.
'ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಗೆದ್ದಿರುವುದಕ್ಕೆ ಇಂದು ನನಗೆ ತುಂಬಾ ಸಂತೋಷವಾಗಿದೆ. ನಾನು ತುಂಬಾ ಉತ್ಸುಕಳಾಗಿದ್ದೇನೆ ಮತ್ತು 84 ರನ್ ಗಳಿಸುವ ಮೂಲಕ ಐಸಿಸಿ ನಾಕೌಟ್‌ನಲ್ಲಿ 1000 ರನ್ ಗಳಿಸಿದ ಮೊದಲ ಆಟಗಾರ ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ಫೈನಲ್‌ಗಾಗಿ ಎದುರು ನೋಡುತ್ತಿದ್ದೇನೆ' ಎಂದು ಶಮಾ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿದ್ದಾರೆ.
ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, 'ಕ್ರೀಡಾಪಟುವಾಗಿ ರೋಹಿತ್ ಶರ್ಮಾ ಅವರ ದೇಹತೂಕ ಹೆಚ್ಚಾಗಿದೆ. ಅವರು ತೂಕವನ್ನು ಇಳಿಸಬೇಕಾಗಿದೆ ಮತ್ತು ಸಹಜವಾಗಿ ಅವರು ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ!' ಎಂದು ವಕ್ತಾರೆ ಶಮಾ ಮೊಹಮ್ಮದ್ ಬರೆದಿದ್ದರು. ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಪೋಸ್ಟ್ ಅನ್ನು ಅಳಿಸಿದ್ದರು.
ಪಾಕಿಸ್ತಾನ ಮೂಲದ ಕ್ರೀಡಾ ಪತ್ರಕರ್ತೆ ಕಾಂಗ್ರೆಸ್ ನಾಯಕಿಯ ಟೀಕೆಗೆ ಪ್ರತಿಯಾಗಿ, ರೋಹಿತ್ ಶರ್ಮಾ ಅವರು 'ಪ್ರಬಲ ಮತ್ತು ವಿಶ್ವ ದರ್ಜೆಯ ಪರ್ಫಾರ್ಮರ್' ಎಂದು ಹೇಳಿದಾಗ, 'ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಕಪಿಲ್ ದೇವ್, ರವಿಶಾಸ್ತ್ರಿ ಮತ್ತು ಉಳಿದ ನಾಯಕರಿಗೆ ಹೋಲಿಸಿದರೆ ರೋಹಿತ್ ಶರ್ಮಾ ಅವರಲ್ಲಿ ಇರುವ ವಿಶೇಷ ಗುಣ ಯಾವುದು? ಎಂದು ಪ್ರಶ್ನಿಸಿದ್ದರು. ಇದು ಬಿಜೆಪಿ ನಾಯಕರು ಸೇರಿದಂತೆ ಎಲ್ಲೆಡೆ ಟೀಕೆಗೆ ಗುರಿಯಾಗಿತ್ತು.
ನಂತರ ಸ್ಪಷ್ಟನೆ ನೀಡಿದ್ದ ಶಮಾ, 'ನಾನು ಸಾಮಾನ್ಯ ರೀತಿಯಲ್ಲಿ ಮಾತನಾಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಹೀಗೆ ಮಾತನಾಡುವ ಹಕ್ಕು ನಮಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ನಾನು ವಿಫಲವಾಗಿದ್ದೇನೆ' ಎಂದು ಹೇಳಿದರು.