ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬಹು ನಿರೀಕ್ಷಿತ RCB ಅನ್‌ಬಾಕ್ಸ್ 2025 ಈವೆಂಟ್ ಅನ್ನು ಆಯೋಜಿಸಲು ಸಜ್ಜಾಗಿದೆ. ಪ್ರತಿವರ್ಷ ಸಂಪ್ರದಾಯವಾಗಿ ಮಾರ್ಪಟ್ಟಿರುವ ಈ ಈವೆಂಟ್, ಅಭಿಮಾನಿಗಳು ಮತ್ತು ಆಟಗಾರರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತದೆ. ವಿಶೇಷ ಆಟಗಾರರ ಪರಿಚಯಗಳು, ಜೆರ್ಸಿ ಬಿಡುಗಡೆ ಮತ್ತು ವಿಶೇಷ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ.
ಅನ್‌ಬಾಕ್ಸ್ ಈವೆಂಟ್ ಐಪಿಎಲ್‌ನಲ್ಲಿ ಅತ್ಯಂತ ಆಕರ್ಷಕವಾದ ಆಫ್-ಫೀಲ್ಡ್ ಕಾರ್ಯಕ್ರಮಗಳಲ್ಲಿ ಒಂದಾಗಿ ಬೆಳೆದಿದೆ. RCB ಅನ್‌ಬಾಕ್ಸ್ 2025 ಈವೆಂಟ್ ಮಾರ್ಚ್ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧಿಕೃತ ಆರಂಭದ ಸಮಯವನ್ನು ಇನ್ನೂ ದೃಢಪಡಿಸಿಲ್ಲ. ಆದರೆ, ಹಿಂದಿನ ಕಾರ್ಯಕ್ರಮಗಳ ಪ್ರಕಾರ ಸಂಜೆ 4 ಗಂಟೆಯ ನಂತರ ಪ್ರಾರಂಭವಾಗುವ ನಿರೀಕ್ಷೆಯಿದೆ. ಅಭಿಮಾನಿಗಳ ನೆಚ್ಚಿನ ಆರ್‌ಸಿಬಿ ಇದೀಗ ಐಪಿಎಲ್ ಆರಂಭಕ್ಕೂ ಮುನ್ನ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿದೆ.
ಮಾರ್ಚ್ 22 ರಿಂದ ಐಪಿಎಲ್ 2025 ಆರಂಭವಾಗಲಿದ್ದು, ಅನ್‌ಬಾಕ್ಸ್ ಕಾರ್ಯಕ್ರಮವು ಹೊಸ ಆವೃತ್ತಿಗೆ ನಾಂದಿ ಹಾಡಲಿದೆ.
ಈ ಈವೆಂಟ್‌ನ ನೇರಪ್ರಸಾರ ವೀಕ್ಷಿಸಲು ಅಭಿಮಾನಿಗಳು ಅಧಿಕೃತ RCB ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು. ಕಳೆದ ವರ್ಷ ಟಿಕೆಟ್ ಬೆಲೆಯು 800 ರಿಂದ 4000 ರೂಪಾಯಿವರೆಗೆ ಇತ್ತು. ಪ್ರತಿ ಬಳಕೆದಾರರು ಆರು ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.
ಈ ಬಾರಿ ಆರ್‌ಸಿಬಿ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿದ್ದು, ಫಾಫ್ ಡುಪ್ಲೆಸಿಸ್ ಅವರನ್ನು ತಂಡದಿಂದ ಕೈಬಿಟ್ಟ ಬಳಿಕ ರಜತ್ ಪಾಟೀದಾರ್ ಅವರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿದೆ. ಅಲ್ಲದೆ, ಹೊಸ ಹೊಸ ಆಟಗಾರರು ತಂಡಕ್ಕೆ ಬಂದಿದ್ದು, ಈ ಬಾರಿ ಬೇಡಿಕೆ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಆರ್‌ಸಿಬಿ ಅನ್‌ಬಾಕ್ಸ್ 2025 ಕಾರ್ಯಕ್ರಮದಲ್ಲಿ ಹೊಸ ಜೆರ್ಸಿಯ ಅನಾವರಣ ಮಾಡುವ ನಿರೀಕ್ಷೆಯಿದೆ. ಆರ್‌ಸಿಬಿ ತಮ್ಮ ಹಿಂದಿನ ಕಪ್ಪು-ಕೆಂಪು ಬಣ್ಣದ ವಿನ್ಯಾಸದ ಜೆರ್ಸಿಗೆ ಮರಳುತ್ತಿದೆ ಎಂದು ವರದಿಗಳು ಸೂಚಿಸಿವೆ. ವಿರಾಟ್ ಕೊಹ್ಲಿ ಆರ್‌ಸಿಬಿ ಜೆರ್ಸಿಯಲ್ಲಿರುವ ಫೋಟೊ ವೈರಲ್ ಆಗಿದ್ದು, ಈ ಬಾರಿ ಅದೇ ಜೆರ್ಸಿ ಅನಾವರಣಗೊಳ್ಳಲಿದೆ ಎನ್ನಲಾಗಿದೆ.
ಆರ್‌ಸಿಬಿ ಆಟಗಾರರು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ದೇವದತ್ ಪಡಿಕ್ಕಲ್, ಲುಂಗಿ ಎನ್‌ಗಿಡಿ ಸೇರಿದಂತೆ ಇತರರು ಇದ್ದಾರೆ.