ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಕಿವೀಸ್ ಬಳಗ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ಕ್ರಿಕೆಟ್ ತಂಡವು 12 ವರ್ಷಗಳ ನಂತರ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಡಲು ಕಾಯುತ್ತಿದ್ದು, ಅತ್ತ ನ್ಯೂಜಿಲೆಂಡ್ ತಂಡ ಕೂಡ 25 ವರ್ಷಗಳ ನಂತರ ಪ್ರಶಸ್ತಿ ಮುಡಿಗೇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಈ ಟೂರ್ನಿಯ ಗುಂಪು ಹಂತದಲ್ಲಿ ಉಭಯ ತಂಡಗಳು ಒಂದು ಬಾರಿ ಮುಖಾಮುಖಿಯಾಗಿದ್ದವು. ಅದರಲ್ಲಿ ಭಾರತ ಗೆದ್ದಿತ್ತು. ಹೈಬ್ರಿಡ್ ಮಾದರಿಯ ಟೂರ್ನಿ ಇದಾಗಿರುವುದರಿಂದ ಭಾರತ ತಂಡವು ತನ್ನ ಎಲ್ಲ ಪಂದ್ಯಗಳನ್ನೂ ದುಬೈನಲ್ಲಿ ಆಡುತ್ತಿದೆ. ಇದರ ನಡುವೆಯೂ ಕಿವೀಸ್ ತಂಡವು ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಸೆಮಿಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು ಭರ್ಜರಿ ಜಯ ಸಾಧಿಸಿ ಬಂದಿರುವ ಮಿಚೆಲ್ ಸ್ಯಾಂಟನರ್ ಬಳಗಕ್ಕೆ ಭಾರತದ ಸ್ಪಿನ್ ಶಕ್ತಿಯನ್ನು ಮೀರಿ ನಿಲ್ಲುವ ಸವಾಲು ಇದೆ.
ವಿಲಿಯಮ್ಸನ್ ಪಡೆ ಭರ್ಜರಿ ಆರಂಭದ ಹೊರತಾಗಿಯೂ ಆಘಾತ
ಇನ್ನು ಮೊದಲು ಬ್ಯಾಟಿಂಗ್ ಆರಂಭಿಸಿರುವ ಕಿವೀಸ್ ಪಡೆ ಭರ್ಜರಿ ಆರಂಭ ಪಡೆಯಿತು. ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ (37 ರನ್) ಮತ್ತು ವಿಲ್ ಯಂಗ್ (15 ರನ್) ಜೋಡಿ ಮೊದಲ ವಿಕೆಟ್ ಗೆ 57 ರನ್ ಗಳ ಭರ್ಜರಿ ಜೊತೆಯಾಟವಾಡಿತು.
ಆದರೆ ಈ ಹಂತದಲ್ಲಿ ದಾಳಿಗಿಳಿದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ವಿಲ್ ಯಂಗ್ ರನ್ನು ಔಟ್ ಮಾಡಿ ಭಾರತಕ್ಕೆ ಮೊದಲ ಮುನ್ನಡೆ ತಂದಿತ್ತರು. ಬಳಿಕ 37 ರನ್ ಗಳಿಸಿ ಅಪಾಯಕಾರಿಯಾಗುತ್ತಿದ್ದ ರಚಿನ್ ರವೀಂದ್ರ ಕುಲದೀಪ್ ಯಾದವ್ ರ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಬಳಿಕ ಕೇನ್ ವಿಲಿಯಮ್ಸನ್ ಕೂಡ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.
ಇತ್ತೀಚಿನ ವರದಿ ಬಂದಾಗ 13 ಓವರ್ ನಲ್ಲಿ ನ್ಯೂಜಿಲೆಂಡ್ 3 ವಿಕೆಟ್ ನಷ್ಟಕ್ಕೆ 77ರನ್ ಗಳಿಸಿದೆ.
ತಂಡಗಳು
ಭಾರತ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ.
ನ್ಯೂಜಿಲೆಂಡ್
ಮಿಚೆಲ್ ಸ್ಯಾಂಟನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್. ವಿಲ್ ಒ ರೂರ್ಕಿ, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ನೇಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್, ಜೆಮಿಸನ್