ದುಬೈ: ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ನಲ್ಲಿ ಮಿಸ್ ಫೀಲ್ಡ್ ವಿಚಾರವಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಿಂದ ಬೈಗುಳಕ್ಕೆ ತುತ್ತಾಗಿದ್ದ ಕುಲದೀಪ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲೂ ಮತ್ತದೇ ತಪ್ಪಿನಿಂದಾಗಿ ನಾಯಕನ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಇಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ನಿಗಧಿತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿ ಭಾರತಕ್ಕೆ ಗೆಲ್ಲಲು 252 ರನ್ ಗಳ ಸವಾಲಿನ ಗುರಿ ನೀಡಿದ್ದಾರೆ.
ರನೌಟ್ ಮಿಸ್ ಮಾಡಿದ ಕುಲದೀಪ್ ಯಾದವ್
ನ್ಯೂಜಿಲೆಂಡ್ ಬ್ಯಾಟಿಂಗ್ ನ 41ನೇ ಓವರ್ ನಲ್ಲಿ ಭರ್ಜರಿಯಾಗಿ ಆಡುತ್ತಿದ್ದ ಡೆರಿಲ್ ಮಿಚೆಲ್ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು. ಈ ವೇಳೆ ಮತ್ತೊಂದು ತುದಿಯಲ್ಲಿದ್ದ ಮೈಕೆಲ್ ಬ್ರೇಸ್‌ವೆಲ್ ತ್ವರಿತ ಸಿಂಗಲ್ ಅನ್ನು ಕದಿಯಲು ಪ್ರಯತ್ನಿಸಿದರು.
ಈ ವೇಳೆ ಚೆಂಡನ್ನು ಹಿಡಿತಕ್ಕೆ ಪಡೆದ ರವೀಂದ್ರ ಜಡೇಜಾ ನೇರವಾಗಿ ವಿಕೆಟ್ ನತ್ತ ಎಸೆದರು. ಆದರೆ ಚೆಂಡು ವಿಕೆಟ್ ಮಿಸ್ ಮಾಡಿಕೊಂಡು ಕೊಹ್ಲಿಯತ್ತ ಸಾಗಿತು. ಈ ವೇಳೆ ಬ್ರೇಸ್ ವೆಲ್ ಇನ್ನೂ ಕ್ರೀಸ್ ಗೆ ಬಂದಿರಲಿಲ್ಲ. ಒಂದು ವೇಳೆ ಕುಲದೀಪ್ ಯಾದವ್ ಆ ಚೆಂಡನ್ನು ಹಿಡಿತಕ್ಕೆ ತೆಗೆದುಕೊಂಡು ಸ್ಟಂಪ್ ಗೆ ಹೊಡಿದ್ದದರೆ ಭಾರತಕ್ಕೆ ಮತ್ತೊಂದು ವಿಕೆಟ್ ಬರುತ್ತಿತ್ತು ಎನ್ನಲಾಗಿದೆ.
ಕೊಹ್ಲಿ ಆಕ್ರೋಶ
ಇನ್ನು ಘಟನೆ ಬೆನ್ನಲ್ಲೇ ಮತ್ತೆ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದರು. ಕುಲದೀಪ್ ಯಾದವ್ ರನ್ನು ಉದ್ದೇಶಿಸಿ ಚೆಂಡನ್ನು ಎಸೆದಾಗ ವಿಕೆಟ್ ಹಿಂದೆ ಕವರ್ ಆಗು ಎನ್ನುವ ರೀತಿಯಲ್ಲಿ ಕೊಹ್ಲಿ ಕುಲದೀಪ್ ಯಾದವ್ ರನ್ನು ತರಾಟೆಗೆ ತೆಗೆದುಕೊಂಡರು. ಓವರ್ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ಜೊತೆಗೆ ನಾಯಕ ರೋಹಿತ್ ಶರ್ಮಾ ಕೂಡ ಕುಲದೀಪ್ ಯಾದವ್ ರನ್ನು ತರಾಟೆಗೆ ತೆಗೆದುಕೊಂಡರು.
ಒಂದು ಎಡವಟ್ಟಿನಿಂದ ಬ್ರೇಸ್ ವೆಲ್ ಅರ್ಧಶತಕ
ಕುಲದೀಪ್ ಯಾದವ್ ಎಡವಟ್ಟಿನಿಂದಾಗಿ ಬ್ರೇಸ್ ವೆಲ್ ನ್ಯೂಜಿಲೆಂಡ್ ಪರ ಅಂತಿಮ ಹಂತದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕೇವಲ 40 ಎಸೆತಗಳಲ್ಲಿ 53 ರನ್ ಗಳಿಸಿ ತಂಡದ ಸವಾಲಿನ ಗುರಿಗೆ ನೆರವಾದರು.
ಒಂದೇ ಟೂರ್ನಿಯಲ್ಲಿ 2ನೇ ಬಾರಿ ಎಡವಟ್ಟು
ಇನ್ನು ಕುಲದೀಪ್ ಯಾದವ್ ಇಂತಹ ಎಡವಟ್ಟು ಮಾಡುತ್ತಿರುವುದು ಇದು 2ನೇ ಬಾರಿ. ಇದೇ ಕುಲದೀಪ್ ಯಾದವ್ ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲೂ ಇಂತಹುದೇ ಎಡವಟ್ಟು ಮಾಡಿದ್ದರು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮಿಡ್-ವಿಕೆಟ್‌ನಲ್ಲಿ ವಿರಾಟ್‌ಗೆ ಚೆಂಡನ್ನು ಹೊಡೆದು ಕುಲ್ದೀಪ್ ಬೌಲಿಂಗ್‌ನಲ್ಲಿ ಸಿಂಗಲ್ ಪಡೆದರು. ಈ ವೇಳೆ ಕೊಹ್ಲಿ ಚೆಂಡನ್ನು ಹಿಡಿತಕ್ಕೆ ಪಡೆದು ವಿಕೆಟ್ ನತ್ತ ಥ್ರೋ ಎಸೆದಿದ್ದರು. ಆದರೆ ಕುಲ್ದೀಪ್ ವಿಕೆಟ್ ಗಿಂತ ದೂರದಲ್ಲಿ ನಿಂತಿದ್ದರಿಂದ ಚೆಂಡನ್ನು ಹಿಡಿತಕ್ಕೆ ಪಡೆಯಲಾಗಲಿಲ್ಲ. ಆಗಲೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಕ್ರೋಶಕ್ಕೆ ತುತ್ತಾಗಿದ್ದರು.