2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ತನ್ನೆಲ್ಲ ಪಂದ್ಯಗಳನ್ನು ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಿರುವುದರಿಂದ ಅನುಕೂಲವಾಗಿದೆ ಎಂಬುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 1996 ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ICC ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ, ಭದ್ರತೆಯ ಕಾರಣದಿಂದ ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿದೆ. ಪಾಕಿಸ್ತಾನಕ್ಕೆ ಪ್ರಯಾಣಿಸದ ಭಾರತ ದುಬೈನಲ್ಲಿ ಆಡಿರುವುದರಿಂದ ತಂಡಕ್ಕೆ ಅನುಕೂಲವಾಗಿದೆ ಎಂದು ಹಲವಾರು ತಜ್ಞರು ಹೇಳಿದ್ದಾರೆ.
ಆದಾಗ್ಯೂ, ಪಾಕಿಸ್ತಾನದ ದಂತಕಥೆ ವಾಸಿಮ್ ಅಕ್ರಮ್, ಭಾರತ ಟೂರ್ನಮೆಂಟ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದರೂ ಸಹ ಯಾವುದೇ ವ್ಯತ್ಯಾಸ ಉಂಟಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. 'ಈ ಭಾರತ ತಂಡವು ಜಗತ್ತಿನ ಎಲ್ಲೇ ಆಡಿದ್ದರೂ ಕೂಡ ಗೆಲ್ಲುತ್ತಿತ್ತು' ಎಂದು ಸ್ಪೋರ್ಟ್ಸ್ ಸೆಂಟ್ರಲ್ ಚಾನೆಲ್‌ನ ಡ್ರೆಸ್ಸಿಂಗ್ ರೂಮ್ ಕಾರ್ಯಕ್ರಮದಲ್ಲಿ ಅಕ್ರಮ್ ಹೇಳಿದ್ದಾರೆ.
'ಹೌದು, ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಬೇಕೆಂದು ನಿರ್ಧರಿಸಿದ ನಂತರ ಸಾಕಷ್ಟು ಮಾತುಕತೆಗಳು ನಡೆದವು. ಆದರೆ ಅವರು ಪಾಕಿಸ್ತಾನದಲ್ಲಿ ಆಡಿದ್ದರೆ, ಅವರು ಅಲ್ಲಿಯೂ ಗೆಲ್ಲುತ್ತಿದ್ದರು' ಎಂದು ಹೇಳಿದರು.
ಭಾರತವು 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿ ಎರಡನ್ನೂ ಒಂದೇ ಒಂದು ಪಂದ್ಯವನ್ನು ಸೋಲದೆಯೇ ಗೆದ್ದಿದೆ. ಆದ್ದರಿಂದ, ಅವರು ಜಗತ್ತಿನ ಯಾವುದೇ ಸ್ಥಳದಲ್ಲಿ ಆಡಿದ್ದರೂ ಪಂದ್ಯಾವಳಿಯಲ್ಲಿ ಗೆಲ್ಲುತ್ತಿದ್ದರು. ತಂಡವು ಅಂತಹ ಉತ್ತಮ ಸ್ಥಿತಿಯಲ್ಲಿದೆ ಎಂದು ಅಕ್ರಮ್ ತಿಳಿಸಿದರು.
'ಅವರು 2024ರ ಟಿ20 ವಿಶ್ವಕಪ್ ಅನ್ನು ಒಂದು ಪಂದ್ಯವನ್ನು ಸೋಲದೆ ಗೆದ್ದರು. ಒಂದೇ ಒಂದು ಪಂದ್ಯವನ್ನು ಸಹ ಸೋಲದೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದರು. ಇದು ಅವರ ಕ್ರಿಕೆಟ್‌ನಲ್ಲಿರುವ ಆಳವನ್ನು ತೋರಿಸುತ್ತದೆ, ಅದು ಅವರ ನಾಯಕತ್ವವನ್ನು ತೋರಿಸುತ್ತದೆ' ಎಂದರು.
ಭಾರತವು ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 0-3 ಮತ್ತು ವಿದೇಶದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಿಜಿಟಿಯಲ್ಲಿ 1-3 ಅಂತರದಲ್ಲಿ ಹೀನಾಯ ಸೋಲುಗಳನ್ನು ಕಂಡ ನಂತರ ಚಾಂಪಿಯನ್ಸ್ ಟ್ರೋಫಿ 2025 ರ ಗೆಲುವು ಬಂದಿದೆ.
'ನಿಮಗೆ ನೆನಪಿದ್ದರೆ, ಅವರು ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 3-0 ಅಂತರದಲ್ಲಿ ಸೋತರು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿಯೂ ಸೋಲು ಕಂಡಿದ್ದರು ಮತ್ತು ಶ್ರೀಲಂಕಾದಲ್ಲಿ ಸರಣಿಯನ್ನು ಕಳೆದುಕೊಂಡರು. ನಾಯಕ, ಕೋಚ್ ಅನ್ನು ಬದಲಿಸಬೇಕು ಎನ್ನುವ ಒತ್ತಡ ಅವರ ಮೇಲಿತ್ತು. ಆದರೆ, ವಿವೇಕ ಮೇಲುಗೈ ಸಾಧಿಸಿತು. ಬಿಸಿಸಿಐ ಅವರನ್ನು ಬೆಂಬಲಿಸಿತು. 'ಇವರು ನಮ್ಮ ನಾಯಕ, ಇವರು ನಮ್ಮ ಕೋಚ್' ಎಂದು ಹೇಳಿತು ಮತ್ತು ಈಗ ಅವರು ಚಾಂಪಿಯನ್‌ಗಳ ಚಾಂಪಿಯನ್ ಆಗಿದ್ದಾರೆ' ಎಂದು ಹೇಳಿದರು.
ಭಾರತ ತಂಡವು ಈಗ ಸತತ ಎಂಟು ಏಕದಿನ ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್ ವಿರುದ್ಧ 3-0 ಸರಣಿ ಗೆಲುವಿನೊಂದಿಗೆ ಪ್ರಾರಂಭಿಸಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಅದೇ ಫಾರ್ಮ್ ಅನ್ನು ಮುಂದುವರಿಸಿತು. ಅಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳನ್ನು ಎರಡು ಬಾರಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದರು.
ಐಪಿಎಲ್ 2025ನೇ ಆವೃತ್ತಿ ನಂತರ ಭಾರತ ತಂಡವು ಜೂನ್‌ನಲ್ಲಿ ಮುಂದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದೆ. ಆ ಸಮಯದಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.