ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಕುರಿತು ಅಪಸ್ವರ ಎತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಖಡಕ್ ತಿರುಗೇಟು ನೀಡಿದೆ.
ಹೌದು.. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ಲಕ್ಷ್ಯದ ಬಗ್ಗೆ ಐಸಿಸಿ ಖಡಕ್ ಉತ್ತರ ನೀಡಿದ್ದು, ಪ್ರೋಟೋಕಾಲ್ ಪಾಲಿಸಲಾಗಿದೆ ಎಂದು ಹೇಳಿದೆ.
ಪಿಸಿಬಿಗೆ ಯಾವುದೇ ಔಪಚಾರಿಕ ವಿವರಣೆಯನ್ನು ನೀಡಲಾಗುವುದಿಲ್ಲ ಎಂದು ಹೇಳಿರುವ ಐಸಿಸಿ, "ಪಿಸಿಬಿ ಮ್ಯಾಂಡರಿನ್‌ಗನ್ನು ನೋಡಿದರೆ, ಐಸಿಸಿ ಸಿಇಒ ಜೆಫ್ ಅಲಾರ್ಡಿಸ್ ಕೂಡ ವೇದಿಕೆಯಲ್ಲಿ ಇರಲಿಲ್ಲ. ಪ್ರೋಟೋಕಾಲ್ ನಿಯಮಗಳನುಸಾರ ಅವರೂ ಕೂಡ ವೇದಿಕೆ ಮೇಲಿರಲಿಲ್ಲ" ಎಂದು ಖಡಕ್ ಉತ್ತರ ನೀಡಿದೆ.
ಪಿಸಿಬಿ ಆರೋಪವೇನು?
ಇಷ್ಟು ದಿನ ಭಾರತ ತಂಡಕ್ಕೆ ಒಂದೇ ಮೈದಾನದಲ್ಲಿ ಆಡುವ ಅಡ್ವಾಂಟೇಜ್ ಸಿಗುತ್ತಿದೆ ಎಂದು ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಸಮಾರಂಭದ ಕುರಿತು ಅಸಮಾಧಾನ ಹೊರಹಾಕಿತ್ತು. ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೋಸ್ಟ್ ಆಗಿದ್ದರೂ ಪಾಕಿಸ್ತಾನ ಒಬ್ಬೇ ಒಬ್ಬ ಪ್ರತಿನಿಧಿಯೂ ವೇದಿಕೆಯಲ್ಲಿ ಭಾಗಿಯಾಗಿರಲಿಲ್ಲ. ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ದೇವಜಿತ್ ಸೈಕಿಯಾ ಆಟಗಾರರಿಗೆ ಪದಕ, ಟ್ರೋಫಿ ಮತ್ತು ಜಾಕೆಟ್‌ಗಳನ್ನು ಹಸ್ತಾಂತರಿಸಿದರು.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಿರ್ದೇಶಕರೂ ಆಗಿದ್ದ ಪಾಕ್ ಕ್ರಿಕೆಟ್ ಮಂಡಳಿಯ ಸಿಇಒ ಸುಮೈರ್ ಅಹ್ಮದ್ ಫೈನಲ್ ಪಂದ್ಯದ ಸಂದರ್ಭದಲ್ಲಿದ್ದರೂ, ಅವರನ್ನು ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ ಎಂದು ಪಿಸಿಬಿ ಆರೋಪಿಸಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಫೆಡರಲ್ ಸಚಿವರಾಗಿರುವುದರಿಂದ ಬೇರೆ ಕೆಲಸಗಳಿಂದಾಗಿ ದುಬೈಗೆ ಹೋಗಿರಲಿಲ್ಲ. ಆದರೆ ಸಿಇಒ ಸುಮೈರ್ ಅಹ್ಮದ್ ಪಾಕಿಸ್ತಾನದ ಪ್ರತಿನಿಧಿಯಾಗಿ ಫೈನಲ್ ಪಂದ್ಯದಲ್ಲಿ ಹಾಜರಿದ್ದರು. ಹೀಗಿದ್ದರೂ ವೇದಿಕೆಗೆ ಯಾಕೆ ಆಹ್ವಾನಿಸಿಲ್ಲ ಎಂದು ಪಿಸಿಬಿ ಪ್ರಶ್ನಿಸಿತ್ತು.
ಪ್ರೋಟೋಕಾಲ್ ಉತ್ತರ ನೀಡಿದ ಐಸಿಸಿ
"ಸುಮೈರ್ ಅಹ್ಮದ್ ಪಿಸಿಬಿಯ ಉದ್ಯೋಗಿಯೇ ಹೊರತು ಪದಾಧಿಕಾರಿಯಲ್ಲ. ಪಂದ್ಯಾವಳಿಯ ನಿರ್ದೇಶಕರು ಪ್ರಸ್ತುತಿಗಾಗಿ ವೇದಿಕೆಯಲ್ಲಿ ಯಾವಾಗ ಇದ್ದಾರೆ ಎಂಬುದನ್ನು ದಯವಿಟ್ಟು ಪರಿಶೀಲಿಸಿ? "ನಾವು ಒಂದು ಉದಾಹರಣೆ ನೀಡಬಹುದು. ಐಸಿಸಿಯ ಹೊಸ ಕಾರ್ಯಾಚರಣೆ ಮತ್ತು ಸಂವಹನ ಮುಖ್ಯಸ್ಥ ಗೌರವ್ ಸಕ್ಸೇನಾ ಒಮ್ಮೆ ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿ ನಿರ್ದೇಶಕರಾಗಿದ್ದರು. ಅಂದು ಅವರು ಕೂಡ ಅಂತಿಮ ಪ್ರಸ್ತುತಿ ಅಂದರೆ ಪ್ರಶಸ್ತಿ ಪ್ರದಾನಕ್ಕಾಗಿ ವೇದಿಕೆಯಲ್ಲಿದ್ದರು" ಎಂದು ಐಸಿಸಿ ಔಪಚಾರಿಕ ಉತ್ತರ ನೀಡಿದೆ ಎಂದು ಮೂಲವೊಂದು ತಿಳಿಸಿದೆ.
ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಭಾರತೀಯ ಆಟಗಾರರಿಗೆ ಬಿಳಿ ಜಾಕೆಟ್‌ಗಳನ್ನು ಮತ್ತು ಪಂದ್ಯದ ಅಧಿಕಾರಿಗಳಿಗೆ ಪದಕಗಳನ್ನು ಪ್ರದಾನ ಮಾಡಿದರು, ಆದರೆ ಐಸಿಸಿ ಅಧ್ಯಕ್ಷ ಜಯ್ ಶಾ ನಾಯಕ ರೋಹಿತ್ ಶರ್ಮಾ ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಿ ವಿಜೇತರಿಗೆ ಪದಕಗಳನ್ನು ನೀಡಿದರು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ನ್ಯೂಜಿಲೆಂಡ್ ಕ್ರಿಕೆಟ್‌ನ ಸಿಇಒ ರೋಜರ್ ಟ್ವೋಸ್ ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೈಕಿಯಾ ಐಸಿಸಿ ಮಂಡಳಿಯಲ್ಲಿ ಬಿಸಿಸಿಐ ನಿರ್ದೇಶಕರಾಗಿದ್ದಾರೆ ಮತ್ತು ಬಿನ್ನಿ ಪರ್ಯಾಯ ನಿರ್ದೇಶಕರಾಗಿದ್ದಾರೆ ಎಂದು ಐಸಿಸಿ ತನ್ನ ಉತ್ತರದಲ್ಲಿ ಉಲ್ಲೇಖಿಸಿದೆ.
ಐಸಿಸಿ ಕ್ಷಮೆಗೆ ಪಿಸಿಬಿ ಪಟ್ಟು
ಇಷ್ಟೆಲ್ಲಾ ಹೈಡ್ರಾಮಾಗಳ ಹೊರತಾಗಿಯೂ ಪಿಸಿಬಿ ಐಸಿಸಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದೆ. ಈ ಕುರಿತು ಮಾತನಾಡಿರುವ ಪಿಸಿಬಿ ಆಧಿಕಾರಿಯೊಬ್ಬರು, "ಅಂತಿಮ ಪ್ರಸ್ತುತಿಗಾಗಿ ನಮ್ಮ ಸಿಒಒ ಮತ್ತು ಪಂದ್ಯಾವಳಿಯ ನಿರ್ದೇಶಕರು ವೇದಿಕೆಯಲ್ಲಿ ಇಲ್ಲದಿರುವುದಕ್ಕೆ ನೀಡಲಾಗುತ್ತಿರುವ ಕಾರಣಗಳು ನಮಗೆ ಅರ್ಥಹೀನವಾಗಿವೆ. ನಾವು ಔಪಚಾರಿಕ ಸ್ಪಷ್ಟೀಕರಣ/ಕ್ಷಮೆಯಾಚನೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಲ್ಲದೆ, "ಆತಿಥೇಯ ರಾಷ್ಟ್ರವಾಗಿ ಪಾಕಿಸ್ತಾನದ ಪಾತ್ರವನ್ನು ಈ ರೀತಿ ನಿರ್ಲಕ್ಷ್ಯಿಸಿರುವುದು ನಮಗೆ ಆಘಾತವನ್ನುಂಟು ಮಾಡಿದೆ. ಐಸಿಸಿ ಸಿಇಒಗಳು, ಅಧ್ಯಕ್ಷರು, ಉಪಾಧ್ಯಕ್ಷರು ಅಥವಾ ಕಾರ್ಯದರ್ಶಿಗಳನ್ನು ಮಾತ್ರ ಸಮಾರಂಭಕ್ಕೆ ಆಹ್ವಾನಿಸುತ್ತದೆ ಎಂಬ ವಿವರಣೆಗಳನ್ನು ನೀಡುವುದು ತರ್ಕಬದ್ಧವಲ್ಲ. ನಾವು ಸಂಪೂರ್ಣ ಸಾರ್ವಜನಿಕ ಸ್ಪಷ್ಟೀಕರಣ ಮತ್ತು ಅಂತಹ ಪಕ್ಷಪಾತ ಮತ್ತು ಅನ್ಯಾಯದ ವರ್ತನೆ ಮತ್ತೆ ಸಂಭವಿಸುವುದಿಲ್ಲ ಎಂಬ ಭರವಸೆಯನ್ನು ಬಯಸುತ್ತೇವೆ ಅಥವಾ ನಾವು ಈ ವಿಷಯವನ್ನು ಆಡಳಿತ ಮಂಡಳಿಗೆ ಕೊಂಡೊಯ್ಯುತ್ತೇವೆ" ಎಂದು ಹೇಳಿದ್ದಾರೆ.
ಅಂದಹಾಗೆ 1996ರ ವಿಶ್ವಕಪ್ ಬಳಿಕ ಪಾಕಿಸ್ತಾನಕ್ಕೆ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿತ್ತು. ಆದರೆ ಭದ್ರತೆಯ ಕಾರಣ ಮುಂದಿಟ್ಟು ಟೀಂ ಇಂಡಿಯಾ ಪಾಕಿಸ್ತಾನ ಪ್ರವೇಶಿಸಲು ಒಪ್ಪಿರಲಿಲ್ಲ. ಹೀಗಾಗಿ ಭಾರತದ ಪಂದ್ಯಗಗಳು ದುಬೈನಲ್ಲಿ ಆಯೋಜನೆಗೊಂಡಿದ್ದವು. ಭಾರತ ಫೈನಲ್ ಪ್ರವೇಶಿಸಿದ್ದರಿಂದ ಅಂತಿಮವಾಗಿ, ಫೈನಲ್ ಪಂದ್ಯವೂ ದುಬೈನಲ್ಲೇ ನಡೆಯಿತು. ಇದು ಪಾಕ್ ಕ್ರಿಕೆಟ್ ಮಂಡಳಿಗೆ ಬಹುದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ 9ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು.