ಐಪಿಎಲ್ 2025ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ 10 ಪ್ರಾಂಚೈಸಿಗಳು ಈಗಾಗಲೇ ಸಿದ್ಧತೆಯಲ್ಲಿ ತೊಡಗಿವೆ. ಇತ್ತ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೀಗ ಆತಂಕ ಎದುರಾಗಿದ್ದು, ಗಾಯದಿಂದಾಗಿ ಸ್ಟಾರ್ ಆಟಗಾರ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ಸ್ಟಾರ್ ಬೌಲರ್ ಪಂದ್ಯದಿಂದ ಹೊರಗುಳಿಯಲು ಮುಂದಾಗಿರುವುದು ಪ್ರಾಂಚೈಸಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಸಂದರ್ಭದಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಚೇತರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಫಿಟ್ ಆಗದ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರಗುಳಿದಿದ್ದರು. ಆದರೆ, ಇದೀಗ ಐಪಿಎಲ್ ಆರಂಭಿಕ ಪಂದ್ಯಗಳಿಂದಲೂ ಅವರು ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
2023ರಲ್ಲಿ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬುಮ್ರಾ, ಸದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಶುಕ್ರವಾರ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿ ಪ್ರಕಾರ, ಬಿಸಿಸಿಐ ಸಿಒಇಯ ವೈದ್ಯಕೀಯ ತಂಡದಿಂದ ಅನುಮತಿ ಪಡೆದ ನಂತರ, ಬುಮ್ರಾ ಏಪ್ರಿಲ್ ಆರಂಭದ ವೇಳೆಗೆ ಮುಂಬೈ ತಂಡವನ್ನು ಸೇರುವ ನಿರೀಕ್ಷೆಯಿದೆ. ಆದರೆ, ಬುಮ್ರಾ ಎಷ್ಟು ಪಂದ್ಯಗಳಿಗೆ ಅಲಭ್ಯರಾಗಿರುತ್ತಾರೆ ಮತ್ತು ಯಾವಾಗ ವಾಪಸ್ ಆಗುತ್ತಾರೆ ಎಂಬುದನ್ನು ನಿಖರವಾಗಿ ದೃಢೀಕರಿಸಲು ಸಾಧ್ಯವಿಲ್ಲ' ಎಂದು ವರದಿ ತಿಳಿಸಿದೆ.
ಮುಂಬೈ ತಂಡದ ಮೊದಲ ಎರಡು ಐಪಿಎಲ್ ಪಂದ್ಯಗಳು ಮಾರ್ಚ್ 23 ರಂದು ಚೆನ್ನೈನಲ್ಲಿ ಸಿಎಸ್‌ಕೆ (ಚೆನ್ನೈ ಸೂಪರ್ ಕಿಂಗ್ಸ್) ವಿರುದ್ಧ ನಡೆಯಲಿದ್ದು, ಮಾರ್ಚ್ 29 ರಂದು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯಲಿದೆ.
ಮಾರ್ಚ್ 31ರಂದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮೊದಲ ಬಾರಿಗೆ ತವರಿನಲ್ಲಿ ಪಂದ್ಯವನ್ನು ಆಡಲಿದೆ. ನಂತರ ಏಪ್ರಿಲ್ 4 ರಂದು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಲಕ್ನೋನಲ್ಲಿ ಸೆಣಸಲಿದೆ. ಬಳಿಕ ಏಪ್ರಿಲ್ 7ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ತವರಿನಲ್ಲಿ ಆಡಲಿದೆ.
ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೋಲ್ಟ್, ದೀಪಕ್ ಚಾಹರ್, ರೀಸ್ ಟಾಪ್ಲಿ, ಕಾರ್ಬಿನ್ ಬಾಷ್, ಅರ್ಜುನ್ ತೆಂಡೂಲ್ಕರ್, ಸತ್ಯನಾರಾಯಣ ರಾಜು, ಅಶ್ವನಿ ಕುಮಾರ್ ಇದ್ದಾರೆ. ಹಾಗೆಯೇ ಆಲ್‌ರೌಂಡರ್‌ಗಳಾದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ರಾಜ್ ಅಂಗದ್ ಬಾವಾ ಇದ್ದಾರೆ.