ಮುಂಬೈ: ಕ್ರಿಕೆಟಿಗ ಯಜುವೇಂದ್ರ ಚಹಲ್, ಧನಶ್ರೀ ವರ್ಮಾ ವಿಚ್ಚೇದನ ವಿಚಾರ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಪ್ರಮುಖವಾಗಿ ಧನಶ್ರೀ ವರ್ಮಾಗೆ ನೀಡಬೇಕಾದ ಜೀವನಾಂಶದ ಕುರಿತು ಅಚ್ಚರಿ ಮಾಹಿತಿ ಹೊರಬಿದ್ದಿದೆ.
ಈ ಹಿಂದೆ ಮೊದಲ ಬಾರಿಗೆ ಚಹಲ್ ಮತ್ತು ಧನಶ್ರೀ ವರ್ಮಾ ವಿಚ್ಚೇದನ ವಿಚಾರ ಬಹಿರಂಗಗೊಂಡಾಗ ಧನಶ್ರೀ ವರ್ಮಾ ಸುಮಾರು 60 ಕೋಟಿ ರೂಗಳಷ್ಟು ಜೀವನಾಂಶ ಕೇಳಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಈ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಲೇ ವದಂತಿಗಳಿಗೆಲ್ಲಾ ಸರತಿ ಸಾಲಲ್ಲಿ ತೆರೆ ಬೀಳುತ್ತಿದೆ.
ಅಂದಹಾಗೆ ವಿಚ್ಚೇದನ ವಿಚಾರವಾಗಿ ಧನಶ್ರೀ ವರ್ಮಾ ಎಷ್ಟು ಮೊತ್ತ ಕೇಳಿದ್ದರು ಎಂಬುದು ಎಲ್ಲಿಯೂ ಬಹಿರಂಗವಾಗಿಲ್ಲವಾದರೂ ಯಜುವೇಂದ್ರ ಚಹಲ್, ಧನಶ್ರೀ ವರ್ಮಾ ದಂಪತಿ ಪರಸ್ಪರ ಒಪ್ಪಿಕೊಂಡ ಮೊತ್ತದ ಪ್ರಮಾಣ ಇದೀಗ ಬಹಿರಂಗವಾಗಿದೆ. ಮೂಲಗಳ ಪ್ರಕಾರ ಚಾಹಲ್ ತನ್ನ ಪರಿತ್ಯಕ್ತ ಪತ್ನಿ ಧನಶ್ರೀ ವರ್ಮಾಗೆ 4 ಕೋಟಿ 75 ಲಕ್ಷ ರೂ.ಗಳ ಶಾಶ್ವತ ಜೀವನಾಂಶವನ್ನು ನೀಡಲು ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಈ ಪೈಕಿ ಕ್ರಿಕೆಟಿಗ ಚಹಲ್ ಇಲ್ಲಿಯವರೆಗೆ 2 ಕೋಟಿ 37 ಲಕ್ಷ 55 ಸಾವಿರ ರೂ.ಗಳನ್ನು ಮಾತ್ರ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಮೊತ್ತವನ್ನು ಪಾವತಿಸದಿರುವುದನ್ನು ನ್ಯಾಯಾಲಯವು 'ಪಾಲಿಸದಿರುವ ವಿಷಯ'ವೆಂದು ಪರಿಗಣಿಸಿದೆ.
ಇದೇ ಕಾರಣಕ್ಕೆ ಈ ಹಿಂದೆ ಕೌಟುಂಬಿಕ ನ್ಯಾಯಾಲಯ ಕೂಲಿಂಗ್-ಆಫ್ ಅರ್ಜಿಯನ್ನು ತಿರಸ್ಕರಿಸಿತು. 'ಪಾಲಿಸದಿರುವ ವಿಷಯ'ವನ್ನು ಎತ್ತಿ ತೋರಿಸಿದ ಕುಟುಂಬ ಸಲಹೆಗಾರರ ವರದಿಯನ್ನು ಪರಿಶೀಲಿಸಿದ ನಂತರ ಕೌಟುಂಬಿಕ ನ್ಯಾಯಾಲಯವು ಈ ನಿರ್ಧಾರಕ್ಕೆ ಬಂದಿತು ಎಂದು ಹೇಳಲಾಗಿದೆ.
ಬುಧವಾರ, ಬಾಂಬೆ ಹೈಕೋರ್ಟ್ ಚಹಲ್ ಮತ್ತು ಧನಶ್ರೀ ವರ್ಮಾ ದಂಪತಿಗಳು ಈಗಾಗಲೇ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಅಂತರವನ್ನು ಕಳೆದಿದ್ದಾರೆ ಎಂದು ಗಮನಿಸಿದ್ದು, ಜೀವನಾಂಶದ ಉಳಿದ ಮೊತ್ತವನ್ನು ಪಾವತಿಸಲು ಅವಕಾಶ ನೀಡಿದ್ದರಿಂದ ಒಪ್ಪಿಗೆಯ ನಿಯಮಗಳ ಅನುಸರಣೆಯ ಪರವಾಗಿ ತೀರ್ಪು ನೀಡಿದೆ.
ಇದೇ ಮಾರ್ಚ್ 25ರಂದು ಯಜುವೇಂದ್ರ ಚಹಲ್ ಅವರು ಈ ಬಾರಿಯ ಐಪಿಎಲ್ ಹಣಾಹಣಿಯಲ್ಲಿ ಮೊದಲ ಪಂದ್ಯ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ಗೂ ಮೊದಲೇ ಧನುಶ್ರೀ ಅವರಿಗೆ ಡಿವೋರ್ಸ್ ಕೊಟ್ಟು ಐಪಿಎಲ್ ಕಡೆ ಸಂಪೂರ್ಣವಾಗಿ ಗಮನ ಹರಿಸಲು ಮುಂದಾಗಿದ್ದಾರೆ.