ವಿಶ್ವದ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ ಆರಂಭಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು, ರಾಜಸ್ಥಾನ ರಾಯಲ್ಸ್ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. 18ನೇ ಆವೃತ್ತಿಯು ಮಾರ್ಚ್ 22ರಿಂದ ಆರಂಭವಾಗಲಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ (ಕೋಲ್ಕತ್ತಾ ನೈಟ್ ರೈಡರ್ಸ್) ತಂಡವು ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡದೊಂದಿಗೆ ಸೆಣಸಲಿದೆ.
ಮಾರ್ಚ್ 23 ರಂದು ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್‌ಎಚ್) ವಿರುದ್ಧ ಆರ್‌ಆರ್ (ರಾಜಸ್ಥಾನ್ ರಾಯಲ್ಸ್) ತನ್ನ ಅಭಿಯಾನವನ್ನು ಆರಂಭಿಸಲಿದೆ. ಆದರೆ, ಮೊದಲ ಮೂರು ಪಂದ್ಯಗಳಿಗೆ, ಸಂಜು ಸ್ಯಾಮ್ಸನ್ ತಂಡವನ್ನು ಮುನ್ನಡೆಸುವುದಿಲ್ಲ. ಸ್ಯಾಮ್ಸನ್ ಸದ್ಯ ತಮ್ಮ ಬೆರಳಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮೊದಲ ಮೂರು ಪಂದ್ಯಗಳಿಗೆ ನಾಯಕನ ಜವಾಬ್ದಾರಿಯನ್ನು ರಿಯಾನ್ ಪರಾಗ್ ಅವರಿಗೆ ವಹಿಸಿದ್ದಾರೆ ಎಂದು ವರದಿಯಾಗಿದೆ.
ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್ ಕರ್ತವ್ಯಗಳಿಗೆ ಸ್ಯಾಮ್ಸನ್ ಇನ್ನೂ ಅನುಮತಿ ಪಡೆದಿಲ್ಲ ಎಂದು ಫ್ರಾಂಚೈಸಿ ತಿಳಿಸಿದೆ. ಆದಾಗ್ಯೂ, ಫ್ರಾಂಚೈಸಿಗೆ ಪ್ರಮುಖ ಬ್ಯಾಟರ್ ಆಗಿರುವುದರಿಂದ ಸ್ಯಾಮ್ಸನ್ ಯಾವುದೇ ಪಂದ್ಯದಿಂದ ಹೊರಗುಳಿಯುವುದಿಲ್ಲ ಎಂದು ಹೇಳಿದೆ.
'ರಾಜಸ್ಥಾನ್ ರಾಯಲ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ಸಂಜು ಸ್ಯಾಮ್ಸನ್, ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್‌ಗೆ ಅನುಮತಿ ಪಡೆಯುವವರೆಗೂ ಬ್ಯಾಟಿಂಗ್ ಮಾತ್ರ ಮಾಡಲಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ಅವರು ಮತ್ತೆ ತಂಡಕ್ಕೆ ನಾಯಕನಾಗಿ ಮರಳುತ್ತಾರೆ' ಎಂದು ಫ್ರಾಂಚೈಸಿ ಹೇಳಿಕೆಯಲ್ಲಿ ತಿಳಿಸಿದೆ.
ಬೆರಳಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ಸ್ಯಾಮ್ಸನ್ ಕೆಲವು ದಿನಗಳ ಹಿಂದಷ್ಟೇ ತಂಡವನ್ನು ಸೇರಿಕೊಂಡಿದ್ದಾರೆ. ಫೆಬ್ರುವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಟಿ20 ಸರಣಿಯ ಸಮಯದಲ್ಲಿ ಸ್ಯಾಮ್ಸನ್ ಗಾಯಗೊಂಡಿದ್ದರು. ಗಾಯದಿಂದಾಗಿ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು.
ರಾಜಸ್ಥಾನ್ ರಾಯಲ್ಸ್ ತಂಡದ ಈ ಆವೃತ್ತಿಯ ಮೊದಲ ಎರಡು ತವರು ಪಂದ್ಯಗಳು ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ಮಾರ್ಚ್ 26 ಮತ್ತು ಮಾರ್ಚ್ 30 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿವೆ. ಉಳಿದ ತವರು ಪಂದ್ಯಗಳನ್ನು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಆಡಲಿದೆ.
2008 ರಲ್ಲಿ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ರಾಯಲ್ಸ್, ಕಳೆದ ವರ್ಷ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿ ಪ್ಲೇಆಫ್ ತಲುಪಿತು. ಆದರೆ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲಿಮಿನೇಟರ್‌ನಲ್ಲಿ ಸೋಲು ಕಂಡಿತು.