ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕೃನಾಲ್ ಪಾಂಡ್ಯ ಅವರು ನಾಲ್ಕು ಓವರ್‌ಗಳಲ್ಲಿ 29 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡದ ರನ್‌ಗೆ ಕಡಿವಾಣ ಹಾಕಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ನೆರವಾದರು.
ಐಪಿಎಲ್ 2025ರ ಆವೃತ್ತಿಯಲ್ಲಿ ಆರ್‌ಸಿಬಿ ಕೃನಾಲ್ ಪಾಂಡ್ಯ ಅವರನ್ನು ಆಯ್ಕೆ ಮಾಡಿರುವುದನ್ನು ಉತ್ತಮ ನಿರ್ಧಾರವಾಗಿದ್ದು, ಈ ವರ್ಷ ಬೆಂಗಳೂರು ಮೂಲದ ಈ ತಂಡದಲ್ಲಿ 'ವಿಶೇಷವಾದದ್ದು ಏನೋ' ಇದೆ ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಶ್ಲಾಘಿಸಿದ್ದಾರೆ.
'ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿರುವ ರಜತ್ ಪಾಟೀದಾರ್ ಅವರಿಗೆ ಇದೊಂದು ಮಹತ್ವದ ಗೆಲುವಾಗಿದೆ. ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿರುವುದು ಖಂಡಿತವಾಗಿಯೂ ತಂಡಕ್ಕೆ ಸಹಾಯ ಮಾಡುತ್ತದೆ' ಎಂದು ಹೇಡನ್ ಹೇಳಿದ್ದಾರೆ ಎಂದು ಜಿಯೋಸ್ಟಾರ್ ವರದಿ ಮಾಡಿದೆ.
'ಆರ್‌ಸಿಬಿ ಬೌಲಿಂಗ್ ಲೈನ್ ಅಪ್ ಬಲಿಷ್ಠವಾಗಿ ಕಾಣುತ್ತಿತ್ತು. ಕೃನಾಲ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸ್ತಿಯಾಗಿದ್ದಾರೆ. ಜೋಶ್ ಹೇಜಲ್‌ವುಡ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಬಹಳ ಸಮಯದ ನಂತರ ಮೊದಲ ಬಾರಿಗೆ, ನಾನು ಆರ್‌ಸಿಬಿಯ ಉತ್ತಮ ತಂಡವನ್ನು ನೋಡುತ್ತಿದ್ದೇನೆ ಮತ್ತು ಈ ವರ್ಷ ಈ ತಂಡದಲ್ಲಿ ಏನೋ ವಿಶೇಷತೆ ಇದೆ ಎಂದು ಭಾವಿಸುತ್ತೇನೆ. ಅವರು ತುಂಬಾ ಬುದ್ಧಿವಂತ ಆಟಗಾರ ಮತ್ತು ಬುದ್ಧಿವಂತ ಬೌಲರ್ ಆಗಿದ್ದರು. ಅವರ ವೇಗ ಬದಲಾವಣೆ, ಸ್ಟಂಪ್‌ಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ. ಇದು ಅತ್ಯುತ್ತಮ ಸೆಟಪ್ ಆಗಿತ್ತು' ಎಂದು ಅವರು ಹೇಳಿದರು.
ಹೆಚ್ಚಿನ ಒತ್ತಡದ ಸಂದರ್ಭಗಳಲ್ಲಿ ಅನುಭವ ಪರಿಣಾಮಕಾರಿಯಾಗಿ ಕೆಲಸಕ್ಕೆ ಬರುತ್ತದೆ ಮತ್ತು ಅವರು ಉತ್ತಮ ಪಾತ್ರವನ್ನು ತೋರಿದರು. ಒಂದು ಹಂತದಲ್ಲಿ, ಆರ್‌ಸಿಬಿ ತೀವ್ರ ತೊಂದರೆಯಲ್ಲಿರುವಂತೆ ಕಾಣಿಸುತ್ತಿತ್ತು. ಆದರೆ, ತಂಡ ಕಂಬ್ಯಾಕ್ ಮಾಡಿದ್ದು ಅದ್ಭುತವಾಗಿತ್ತು. 59 ರನ್ ಗಳಿಸಿ ನಾಟೌಟ್ ಆಗಿ ಉಳಿದ ವಿರಾಟ್ ಕೊಹ್ಲಿ ಅವರ ಅರ್ಧಶತಕವನ್ನು ಹೇಡನ್ ಶ್ಲಾಘಿಸಿದರು.
ಚೇಸ್ ಕಿಂಗ್ ಎಂದೇ ಹೆಸರಾಗಿರುವ ವಿರಾಟ್ ಕೊಹ್ಲಿ ಅವರಿಗೆ ಇದು ಸೂಕ್ತವಾದ ಮೊತ್ತವಾಗಿತ್ತು. ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ ವಿರಾಟ್ ಮತ್ತು ಫಿಲ್ ಸಾಲ್ಟ್ ಅವರ ಜೊತೆಯಾಟ ಅದ್ಭುತವಾಗಿತ್ತು. ಇಂದು ರಾತ್ರಿ ಮತ್ತು ಕಳೆದ ಎರಡು ಆವೃತ್ತಿಗಳಲ್ಲಿ, ನಾವು 'ವಿರಾಟ್ ಕೊಹ್ಲಿ 2.0' ಅನ್ನು ನೋಡಿದ್ದೇವೆ ಎಂದರು.