ಐಪಿಎಲ್ 2025ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಜಯ ಸಾಧಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆರಂಭಿಕರಾಗಿ ಬಂದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು. ಇಂದು ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಆರ್‌ಸಿಬಿ ಸೆಣಸಲಿದೆ.
ಆರು ದಿನಗಳ ವಿರಾಮದ ನಂತರ ಆರ್‌ಸಿಬಿ ಆಟಗಾರರು ಫ್ರೆಶ್ ಆಗಿದ್ದಾರೆ. ತಂಡವು ಈ ವಾರದ ಆರಂಭದಲ್ಲಿ ಚೆನ್ನೈಗೆ ಆಗಮಿಸಿದ್ದು, ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ.
ಅಭ್ಯಾಸದ ವೇಳೆ ಬುಧವಾರ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಆಟೋಗ್ರಾಫ್‌ಗಳಿಗೆ ಸಹಿ ಹಾಕುವ ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವಿಡಿಯೋವನ್ನು ಆರ್‌ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ಹೆಚ್ಚಿನ ಅಭಿಮಾನಿಗಳು ಸಿಎಸ್‌ಕೆ ಜೆರ್ಸಿಯನ್ನು ಧರಿಸಿದ್ದರೂ ಕೂಡ, ವಿರಾಟ್ ಕೊಹ್ಲಿ ಅವರ ಬಳಿ ಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ವಿಡಿಯೋದ ಕೊನೆಯಲ್ಲಿ, ಸಿಎಸ್‌ಕೆ ಅಭಿಮಾನಿಯೊಬ್ಬರು ಶುಕ್ರವಾರ ಸಿಎಸ್‌ಕೆ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಕೊಹ್ಲಿಗೆ ಶುಭ ಹಾರೈಸಿದರು.
ಇತ್ತೀಚೆಗೆ, ಪಂಜಾಬ್ ಕಿಂಗ್ಸ್ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್, ವಿರಾಟ್ ಕೊಹ್ಲಿ ಅವರೊಂದಿಗೆ ತಾವು ಸಂಪರ್ಕದಲ್ಲಿದ್ದು, ಅವರ ಗಮನಾರ್ಹ ವೃತ್ತಿಜೀವನವನ್ನು ಟ್ರ್ಯಾಕ್ ಮಾಡುವುದನ್ನು ಆನಂದಿಸುತ್ತಿದ್ದಾರೆ ಎಂದು ಹೇಳಿದರು. 2008ರ ಅಂಡರ್ 19 ವಿಶ್ವಕಪ್ ವೇಳೆ ಸ್ಟೊಯಿನಿಸ್ ಮತ್ತು ಕೊಹ್ಲಿ ನಡುವೆ ಉತ್ತಮ ಸಂಪರ್ಕ ಏರ್ಪಟ್ಟಿತ್ತು.
ಕೆಕೆಆರ್ ವಿರುದ್ಧದ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೇಳೆ ಈಡನ್ ಗಾರ್ಡನ್ಸ್ ಮೈದಾನದ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗಿದ್ದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಬಳಿ ಓಡಿ ಬಂದು ಕಾಲಿಗೆ ಬಿದ್ದು, ಅಪ್ಪಿಕೊಂಡಿದ್ದರು.
ನಾನು ವಿರಾಟ್ ಕೊಹ್ಲಿ ಅವರ ಕಾಲಿಗೆ ಬಿದ್ದ ತಕ್ಷಣ ಅವರು ನನ್ನನ್ನು ಮೇಲಕ್ಕೆತ್ತಿದರು. ನನ್ನ ಹೆಸರನ್ನು ಕೇಳಿದ ಅವರು ಇಲ್ಲಿಂದ ಬೇಗ ಓಡಿಹೋಗು ಎಂದು ಹೇಳಿದರು. ನನ್ನನ್ನು ಹಿಡಿಯಲು ಬಂದ ಭದ್ರತಾ ಸಿಬ್ಬಂದಿಗೆ ನನಗೆ ಹೊಡೆಯದಂತೆ ಮನವಿ ಮಾಡಿದರು ಮತ್ತು ನಿಧಾನವಾಗಿ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲು ಕೇಳಿದರು ಎಂದು ಜಾಮೀನು ಪಡೆದ ಬಳಿಕ ರಿತುಪರ್ಣೋ ಪಖೀರಾ ಹೇಳಿದ್ದಾರೆ.