ನೇಪಿಯರ್: ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಕಳಪೆ ಪ್ರದರ್ಶನ ತೋರುತ್ತಿರುವ ಪಾಕಿಸ್ತಾನ ಕಳಪೆ ಪ್ರದರ್ಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಸೋತ ಪಾಕಿಸ್ತಾನ ಇದೀಗ ಮೊದಲ ಏಕದಿನ ಪಂದ್ಯದಲ್ಲೂ ಹೀನಾಯ ಸೋಲು ಕಂಡಿದೆ.
ನೇಪಿಯರ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅನನುಭವಿ ನ್ಯೂಜಿಲೆಂಡ್ ತಂಡದ ವಿರುದ್ಧ ಪಾಕಿಸ್ತಾನದ ಅನುಭವಿ ತಂಡ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 344 ರನ್ ಗಳ ಭರ್ಜರಿ ಮೊತ್ತ ದಾಖಲಿಸಿದೆ. ಈ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ 44.1 ಓವರ್ ನಲ್ಲಿ 271 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ 73 ರನ್ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಅರ್ಧಶತಕ ಸಿಡಿಸಿದ ಬಾಬರ್ ಆಜಂ
ಇನ್ನು ಚೇಸಿಂಗ್ ವೇಳೆ ಪಾಕಿಸ್ತಾನ ಪರ ಬಾಬರ್ ಆಜಂ 83 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 78 ರನ್ ಕಲೆಹಾಕಿದರು. ಅವರಿಗೆ ಸಲ್ಮಾನ್ ಆಘಾ (58 ರನ್) ಉತ್ತಮ ಸಾಥ್ ನೀಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಬೌಲಿಂಗ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಎಲ್ಲ ವಿಭಾಗದಲ್ಲಿಯೂ ಅನುಭವಿ ಪಾಕಿಸ್ತಾನ ತಂಡ ಅನನುಭವಿ ನ್ಯೂಜಿಲೆಂಡ್ ತಂಡದ ವಿರುದ್ಧ ಸಪ್ಪೆಯಾಗಿ ಕಂಡಿತು.
ಹಿರಿಯ ಆಟಗಾರರ ವಿರುದ್ಧ ವ್ಯಾಪಕ ಆಕ್ರೋಶ
ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಸತತ ಹೀನಾಯ ಪ್ರದರ್ಶನಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಮುಖವಾಗಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಮತ್ತು ಕೋಚ್ ಬಸಿತ್ ಅಲಿ ಪಾಕಿಸ್ತಾನದ ಅನುಭವಿ ಆಟಗಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಇಂದಿನ ಸ್ಥಿತಿಗೆ ತಂಡದ ಇಬ್ಬರು ಆಟಗಾರರೇ ಕಾರಣ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
'ಜಾಗತಿಕ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದ ಪಾಕಿಸ್ತಾನ ತನ್ನ ಖ್ಯಾತಿಯಿಂದ ದೂರ ಸರಿದಿದೆ. ಏಷ್ಯಾ ಖಂಡದ ದೈತ್ಯ ತಂಡ ಎಂಬ ಪಟ್ಟ ಕೂಡ ಕೈತಪ್ಪಿದೆ. ಕಳೆದುಹೋದ ವೈಭವವನ್ನು ಪುನರ್ನಿರ್ಮಿಸಲು ಪ್ರಯತ್ನಿಸುವಾಗ ಅವರು ಹಿಂದಿನ ನೆರಳುಗಳನ್ನು ಬೆನ್ನಟ್ಟುತ್ತಿದ್ದಾರೆ. ಟಿ20ಐ ಸರಣಿಯಲ್ಲಿ 4-1 ಅಂತರದ ಸೋಲಿನ ನಂತರ, ಪಾಕಿಸ್ತಾನವು ಏಕದಿನ ಪಂದ್ಯದಲ್ಲೂ ಹೀನಾಯ ಸೋಲು ಕಂಡಿದೆ. ಒಂದು ಹಂತದಲ್ಲಿ 249/4 ಸ್ಥಿತಿಯಲ್ಲಿದ್ದ ಪಾಕಿಸ್ತಾನ ಬಳಿಕ 271 ರನ್ ಗಳಿಗೇ ಆಲೌಟ್ ಆಯಿತು. ಕೇವಲ 20 ರನ್ ಗಳ ಅಂತರದಲ್ಲಿ 6 ವಿಕೆಟ್ ಉರುಳಿದೆ. ಪಾಕಿಸ್ತಾನ ಮಧ್ಯಮ ಕ್ರಮಾಂಕ ಸಂಪೂರ್ಣ ನೆಲಕಚ್ಚಿದೆ ಎಂದು ಹೇಳಿದರು.
3ನೇ ಕ್ರಮಾಂಕದಲ್ಲಿ ಬಾಬರ್ ಏಕೆ ಬಂದರು?
ಇದೇ ವೇಳೆ ಬಾಬರ್ ಆಜಂ ಕ್ರಮಾಂಕದ ಕುರಿತೂ ಮಾತನಾಡಿರುವ ಬಸಿತ್, ಚಾಂಪಿಯನ್ಸ್ ಟ್ರೋಫಿಯಲ್ಲಿ ಸಂಪೂರ್ಣ ವಿಫಲರಾಗಿರುವ ಬಾಬರ್ ಆಜಂರನ್ನು ಏಕೆ ಮೂರನೇ ಕ್ರಮಾಂಕದಲ್ಲಿ ಬಿಡಲಾಯಿತು ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೂ ಈ ಬಾಬರ್ ಆಜಂ ಮತ್ತು ಮಹಮದ್ ರಿಜ್ವಾನ್ ರನ್ನು ಆರಂಭಿಕರಾಗಿ ಕಣಕ್ಕಿಳಿಯುವಂತೆ ಸೂಚಿಸಿದ ಪ್ರೊಫೆಸರ್ ಯಾರು..? ಅವರಿಗೆ ಮೊದಲು ಚಪ್ಪಲಿಯಲ್ಲಿ ಹೊಡೆಯಬೇಕು. ಪಾಕಿಸ್ತಾನ ಕ್ರಿಕೆಟ್ ತಂಡದ ಇಂದಿನ ಪರಿಸ್ಥಿತಿಗೆ ಅವರೇ ಕಾರಣ.. ಅವರು ಕೂಡಲೇ ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು.. ಎಂದು ಆಗ್ರಹಿಸಿದ್ದಾರೆ.
ಅಂತೆಯೇ ಈಗ ಯಾರೂ ಹೊರಬರುವುದಿಲ್ಲ. ಕ್ರಿಕೆಟ್ ಪ್ರಾಧ್ಯಾಪಕರಾಗಲು ಪ್ರಯತ್ನಿಸುವವರನ್ನು ಬೂಟುಗಳಿಂದ ಹೊಡೆಯಬೇಕು. ಬಾಬರ್ ಮತ್ತು ರಿಜ್ವಾನ್ ಅವರನ್ನು ಆರಂಭಿಕ ಆಟಗಾರರನ್ನಾಗಿ ಮಾಡಿದ ವ್ಯಕ್ತಿ ಪಾಕಿಸ್ತಾನ ಕ್ರಿಕೆಟ್ ಅನ್ನು ನಾಶಮಾಡಲು ಕಾರಣ. ಪಾಕಿಸ್ತಾನ ತಂಡವು ಫ್ರಾಂಚೈಸ್ ತಂಡವಾಗಿದೆ. ಇದು ಆದ್ಯತೆಗಳ ಆಧಾರದ ಮೇಲೆ ಒಂದು ತಂಡವಾಗಿದೆ ಎಂದು ಬಸಿತ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.