ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನ್ನು ನಿಲ್ಲಿಸಲಾಗಿತ್ತು. ಇದೀಗ ಐಪಿಎಲ್ ಪುನರಾರಂಭದ ಬಗ್ಗೆ ನಿರ್ಧರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇನ್ನೂ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಶನಿವಾರ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, ಐಪಿಎಲ್ 2025 ಮೇ 16ರಂದು ಪುನರಾರಂಭವಾಗಬಹುದು ಎಂದು ವರದಿಯಾಗಿದೆ.
ಕ್ರಿಕ್‌ಬಜ್ ಪ್ರಕಾರ, ಮಂಡಳಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಮಂಡಳಿಯು ಎಲ್ಲ ಪಾಲುದಾರರು ಮತ್ತು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಐಪಿಎಲ್ 2025ರ ಪುನರಾರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
'ಬಿಸಿಸಿಐ ನಿನ್ನೆ ಏಳು ದಿನಗಳ ಅವಧಿಗೆ ಐಪಿಎಲ್ ಅನ್ನು ಸ್ಥಗಿತಗೊಳಿಸಿತು ಮತ್ತು ಇನ್ನೂ ನಾಲ್ಕು ದಿನಗಳು ಉಳಿದಿವೆ. ಬಿಸಿಸಿಐ ಪರಿಸ್ಥಿತಿ ಮತ್ತು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಐಪಿಎಲ್‌ನ ಎಲ್ಲ ಪಾಲುದಾರರು ಮತ್ತು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ ಐಪಿಎಲ್ ಪುನರಾರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
ಇದಲ್ಲದೆ, ಬಿಸಿಸಿಐ ಮುಂದಿನ 48 ಗಂಟೆಗಳಲ್ಲಿ ಫ್ರಾಂಚೈಸಿಗಳು, ಪ್ರಸಾರಕರು, ಪ್ರಾಯೋಜಕರು ಮತ್ತು ರಾಜ್ಯ ಸಂಘಗಳೊಂದಿಗೆ ಮಾತುಕತೆ ನಡೆಸಲಿದೆ.
'ಈ ಹಂತದಲ್ಲಿ ಐಪಿಎಲ್‌ನ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಅದರ ಪುನರಾರಂಭದ ಸಮಯವನ್ನು ಅಂತಿಮಗೊಳಿಸುವ ಮೊದಲು ಭಾರತ ಸರ್ಕಾರದ ಅನುಮತಿ ಪಡೆಯುವುದು ಸಹ ವಿವೇಕಯುತ ಮತ್ತು ಅಗತ್ಯವಾಗಿದೆ. ಸಂಪೂರ್ಣ ಪ್ರಕ್ರಿಯೆಯು ಸರಿಯಾದ ಸಮಯದಲ್ಲಿ ಮುಗಿದ ನಂತರ ಬಿಸಿಸಿಐ ಐಪಿಎಲ್ ಪುನರಾರಂಭದ ದಿನಾಂಕವನ್ನು ಘೋಷಿಸಲಿದೆ' ಎಂದು ಅವರು ಹೇಳಿದರು.
ಧರ್ಮಶಾಲಾದಲ್ಲಿ ಪಿಬಿಕೆಎಸ್ ಮತ್ತು ಡಿಸಿ ನಡುವಿನ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಿದ ನಂತರ ಐಪಿಎಲ್ 2025 ಅನ್ನು ಒಂದು ವಾರ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಂಡಳಿಯು ಎಲ್ಲ ಆಟಗಾರರನ್ನು ತಕ್ಷಣ ಮನೆಗೆ ಮರಳುವಂತೆ ಹೇಳಿದೆ. ಐಪಿಎಲ್ 2025 ರಲ್ಲಿ ನಾಲ್ಕು ಪ್ಲೇಆಫ್ ಪಂದ್ಯಗಳನ್ನು ಹೊರತುಪಡಿಸಿ ಲೀಗ್ ಹಂತದ 12 ಪಂದ್ಯಗಳನ್ನು ಇನ್ನೂ ಆಡಬೇಕಾಗಿದೆ.