ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯನ್ನು ಪುನರಾರಂಭಿಸಲು ನಿರ್ದಿಷ್ಟ ದಿನಾಂಕವೊಂದನ್ನು ಅಂತಿಮಗೊಳಿಸಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ಎನ್‌ಡಿಟಿವಿಗೆ ಸ್ಪಷ್ಟಪಡಿಸಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು. ಇದೀಗ, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದರಿಂದ, ಪಂದ್ಯಾವಳಿ ಶೀಘ್ರದಲ್ಲೇ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಎನ್‌ಡಿಟಿವಿ ಮೂಲಗಳ ಪ್ರಕಾರ, ಐಪಿಎಲ್ ಆಡಳಿತ ಮಂಡಳಿಯು ಪಂದ್ಯಾವಳಿಯ ವೇಳಾಪಟ್ಟಿಯನ್ನು ಮೇ 30ರವರೆಗೆ ವಿಸ್ತರಿಸುವ ಬಗ್ಗೆ ಯೋಚಿಸುತ್ತಿದೆ ಎನ್ನಲಾಗಿದೆ.
ಬಿಸಿಸಿಐ ಭಾನುವಾರ ರಾತ್ರಿಯೊಳಗೆ (ಮೇ 11) ಪರಿಷ್ಕೃತ ವೇಳಾಪಟ್ಟಿಯನ್ನು ಫ್ರಾಂಚೈಸಿಗಳೊಂದಿಗೆ ಹಂಚಿಕೊಳ್ಳಲಿದ್ದು, ಉಳಿದ ಪಂದ್ಯಗಳನ್ನು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ಗಳಲ್ಲಿ ನಡೆಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರ ಭಾರತ ನಡೆಸಿದ ಆಪರೇಷನ್ ಸಿಂಧೂರ ನಂತರ ಭಾರತ-ಪಾಕಿಸ್ತಾನ ಗಡಿ ಸಂಘರ್ಷವು ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಡುವ ಸಾಧ್ಯತೆ ಉಂಟಾಗಿದ್ದರಿಂದ, ಬಿಸಿಸಿಐ ಶುಕ್ರವಾರ ಐಪಿಎಲ್ ಅನ್ನು ಒಂದು ವಾರ ಸ್ಥಗಿತಗೊಳಿಸಬೇಕಾಯಿತು.
ಪಂದ್ಯಾವಳಿಯಲ್ಲಿ ಲೀಗ್ ಹಂತದ 12 ಪಂದ್ಯಗಳು ಮತ್ತು ಪ್ಲೇ-ಆಫ್ ಹಂತದ ನಾಲ್ಕು ಪಂದ್ಯಗಳು ಉಳಿದಿವೆ. ಎಲ್ಲ 10 ಫ್ರಾಂಚೈಸಿಗಳಲ್ಲಿರುವ ಹೆಚ್ಚಿನ ವಿದೇಶಿ ಆಟಗಾರರು ಈಗಾಗಲೇ ದೇಶವನ್ನು ತೊರೆದಿದ್ದಾರೆ.
ಪಾಕಿಸ್ತಾನದಿಂದ ನಡೆದ ವೈಮಾನಿಕ ಮತ್ತು ಡ್ರೋನ್ ದಾಳಿಯಿಂದಾಗಿ ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದ ಧರ್ಮಶಾಲಾಯ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಡುವಿನ ಪಂದ್ಯವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಲಾಗಿತ್ತು.
ಪಂದ್ಯ ರದ್ದಾದ ಬಳಿಕ ಪ್ರೇಕ್ಷಕರನ್ನು ಕ್ರೀಡಾಂಗಣದಿಂದ ತೆರವುಗೊಳಿಸಿದ ನಂತರ, ಎರಡೂ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಹಾಗೂ ಧರ್ಮಶಾಲಾದಲ್ಲಿ ಪಂದ್ಯಕ್ಕಾಗಿ ಕೆಲಸ ಮಾಡುತ್ತಿದ್ದ ಇತರ ಸಿಬ್ಬಂದಿಯನ್ನು ಬಿಗಿ ಭದ್ರತೆಯಲ್ಲಿ ತಮ್ಮ ತಮ್ಮ ಹೋಟೆಲ್‌ಗಳಿಗೆ ಸುರಕ್ಷಿತವಾಗಿ ಹಿಂತಿರುಗಿಸಲಾಯಿತು.