ಬೆಂಗಳೂರು: ಪಹಲ್ಗಾಮ್ ಉಗ್ರ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನಲೆಯಲ್ಲಿ ಸ್ಥಗಿತವಾಗಿದ್ದ ಐಪಿಎಲ್ ಟೂರ್ನಿ ಪುನಾರಂಭಗೊಳ್ಳುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂದ ದೊಡ್ಡ ಆತಂಕ ನಿವಾರಣೆಯಾಗಿದೆ.
ಹೌದು.. ರಾಷ್ಟ್ರದ ಹಿತಾಸಕ್ತಿ ಮತ್ತು ದೇಶದ ಭದ್ರತಾ ವಿಚಾರದ ಹಿನ್ನಲೆಯಲ್ಲಿ ಐಪಿಎಲ್ ಟೂರ್ನಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಇದೇ ಮೇ 17ರಿಂದ ಟೂರ್ನಿ ಪುನಾರಂಭಗೊಳ್ಳುತ್ತಿದ್ದು, ಎಲ್ಲ ತಂಡಗಳು ಬಾಕಿ ಉಳಿದಿರುವ ಪಂದ್ಯಗಳಿಗೆ ಸಜ್ಜಾಗಿದೆ. ಅಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಸಿದ್ಧತೆ ನಡೆಸಿದ್ದು, ಈ ನಡುವೆ ತಂಡಕ್ಕಿದ್ದ ದೊಡ್ಡ ಆತಂಕ ನಿವಾರಣೆಯಾಗಿದೆ.
ಈ ಹಿಂದೆ ಉಗ್ರ ದಾಳಿ ಮತ್ತು ಸೇನಾ ಕಾರ್ಯಾಚರಣೆ ಹಿನ್ನಲೆಯಲ್ಲಿ ವಿದೇಶಿ ಆಟಗಾರರು ಸ್ವದೇಶಕ್ಕೆ ಮರಳಿದ್ದರು. ಈ ಪೈಕಿ ಕೆಲ ಆಟಗಾರರು ರಾಷ್ಟ್ರೀಯ ತಂಡದ ಸೇವೆಗಾಗಿ ನಿಯೋಜನೆಯಾಗುವ ವಿಶ್ವಾಸವಿತ್ತು. ಹೀಗಾಗಿ ಆರ್ ಸಿಬಿಯಲ್ಲಿ ಕನಿಷ್ಠ 4 ಆಟಗಾರರ ಕೊರತೆ ಕಾಣಲಿದೆ ಎಂದು ಹೇಳಲಾಗಿತ್ತು. ತಂಡ ಭರ್ಜರಿ ಪ್ರದರ್ಶನ ನೀಡುತ್ತಿರುವ ಈ ಹೊತ್ತಿನಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿ ತಂಡವನ್ನು ಕಾಡಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಆತಂಕ ಶೇ.50ರಷ್ಚು ನಿವಾರಣೆಯಾಗಿದೆ ಎಂದು ಹೇಳಲಾಗಿದೆ.
ತಂಡಕ್ಕೆ ಮರಳಿದ ಲಿವಿಂಗ್ ಸ್ಟೋನ್ ಮತ್ತು ರೊಮೊರಿಯೋ ಶೆಫರ್ಡ್!
ಈ ನಡುವೆ ಸ್ವದೇಶಕ್ಕೆ ಮರಳಿದ್ದ ರೊಮಾರಿಯೋ ಶೆಫರ್ಡ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಆರ್ ಸಿಬಿ ತಂಡ ಸೇರಿಕೊಳ್ಳಲಿದ್ದಾರೆ. ಇಡೀ ಐಪಿಎಲ್ ಟೂರ್ನಿಯಲ್ಲಿ ರೊಮಾರಿಯೋ ಶೆಫರ್ಡ್ ತಂಡದಲ್ಲಿರಲಿದ್ದಾರೆ. ಬಳಿಕ ಅವರ ರಾಷ್ಟ್ರೀಯ ತಂಡದ ಸೇವೆಗೆ ನಿಯೋಜನೆಯಾಗಲಿದ್ದಾರೆ ಎಂದು ಹೇಳಲಾಗಿದ್ದು, ಲಿವಿಂಗ್ ಸ್ಟೋನ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದ ಕಾರಣ ಆರ್ ಸಿಬಿಯಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ.
ಉಳಿದಂತೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬದಲಿಗೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಾತ್ಕಾಲಿಕ ಬದಲಿ ಆಟಗಾರ ಎಂದು ಪರಿಗಣಿಸಲಾಗಿದೆ ಎಂದು ಆರ್ ಸಿಬಿ ತಂಡದ ಮೂಲಗಳು ತಿಳಿಸಿವೆ.
ಈ ನಡುವೆ ಗಾಯಗೊಂಡು ಹೊರಗುಳಿದಿರುವ ದೇವದತ್ ಪಡಿಕ್ಕಲ್ ಬದಲಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಈಗಾಗಲೇ ತಂಡ ಸೇರಿಕೊಂಡಿದ್ದು, ನಾಯಕ ರಜತ್ ಪಾಟಿದಾರ್ ಗಾಯದ ಸಮಸ್ಯೆ ತಂಡಕ್ಕೆ ತಲೆನೋವಾಗಿದೆ.
ಮತ್ತೊಂದೆಡೆ ಹೇಜಲ್ವುಡ್ ಬದಲಿಗೆ ಶ್ರೀಲಂಕಾದ ಬೇಬಿ ಮಲಿಂಗಾ ಎಂದೇ ಖ್ಯಾತಗಳಿಸಿರುವ ನುವಾನ್ ತುಷಾರ ಆರ್ ಸಿಬಿ ತಂಡ ಸೇರಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ನ್ಯೂಜಿಲೆಂಡ್ ಬೌಲರ್ ಮ್ಯಾಟ್ ಹೆನ್ರಿ ಮತ್ತು ಫಿಲ್ ಸಾಲ್ಟ್ ಕೂಡ ಆರ್ ಸಿಬಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ.
ಆರ್‌ಸಿಬಿ ಪಾಲಿಗೆ ವರವಾದ ಐಪಿಎಲ್ ಮುಂದೂಡಿಕೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ 2025 ಅನ್ನು ಒಂದು ವಾರ ಮುಂದೂಡಲಾಗಿತ್ತು. ಈ ಮುಂದೂಡಿಕೆಯಿಂದ ಆರ್‌ಸಿಬಿ ತಂಡಕ್ಕೆ ದೊಡ್ಡ ಲಾಭವಾಗಿದ್ದು, ರಜತ್ ಪಾಟಿದಾರ್ ಅವರ ಬೆರಳಿನ ಗಾಯಕ್ಕೆ ಚೇತರಿಸಿಕೊಳ್ಳಲು ಸಮಯ ಸಿಕ್ಕಿದೆ. ಅವರ ಜೊತೆಗೆ ಇತರ ಗಾಯಾಳು ಆಟಗಾರರಿಗೂ ಚೇತರಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಐಪಿಎಲ್ ಪುನರಾರಂಭವಾದ ನಂತರ ಆರ್‌ಸಿಬಿ ಬಲಿಷ್ಠ ತಂಡವಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಮೇ 10 ರ ಶನಿವಾರ, ರಜತ್ ಪಾಟಿದಾರ್ ಆರ್‌ಸಿಬಿ ತಂಡದೊಂದಿಗೆ ಲಕ್ನೋದಿಂದ ಬೆಂಗಳೂರಿಗೆ ಮರಳಿದ್ದಾರೆ. ಲಕ್ನೋದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಸ್ಥಗಿತಗೊಳಿಸಲಾಗಿರುವುದರಿಂದ ಅವರು ತಂಡದೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಒಂದು ವೇಳೆ ಪಾಟೀದಾರ್ ಲಕ್ನೋ ವಿರುದ್ಧ ಆಡದಿದ್ದರೆ, ಜಿತೇಶ್ ಶರ್ಮಾ ಆರ್‌ಸಿಬಿಯ ನಾಯಕತ್ವ ವಹಿಸಿಕೊಳ್ಳುತ್ತಿದ್ದರು.