ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಭಾರತದ ರನ್ ಮೆಷಿನ್ ದಿಢೀರ್ ನಿವೃತ್ತಿ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.
ಈಗಾಗಲೇ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಪ್ರಮುಖ ಸ್ಪಿನ್ನರ್ ಆರ್ ಅಶ್ವಿನ್ ವಿದಾಯ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ಕೊಹ್ಲಿ ನಿವೃತ್ತಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೇವಲ 36 ವರ್ಷದ ವಿರಾಟ್ ಕೊಹ್ಲಿ ಏಕೆ ಟೆಸ್ಟ್ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದರು ಎಂಬ ಪ್ರಶ್ನೆ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಪ್ರಸ್ತುತ ಐಪಿಎಲ್ ನಲ್ಲಿ ತೊಡಗಿಸಿಕೊಂಡಿರುನ ಕೊಹ್ಲಿ ನೆಟ್ಸ್ ನಲ್ಲಿ ಕೆಂಪು ಚೆಂಡುಗಳಲ್ಲಿ ಅಭ್ಯಾಸ ಮಾಡುತ್ತಿದ್ದರು. ಇದು ಅವರು ಮುಂದಿನ ಭಾರತದ ಟೆಸ್ಟ್ ಸರಣಿಗಳಿಗೆ ಅಭ್ಯಾಸ ಮಾಡುತ್ತಿರುವುದು ಕಂಡುಬಂದಿತ್ತು. ಅಲ್ಲದೆ ಕೋಚ್ ಗೌತಮ್ ಗಂಭೀರ್ ಬಳಿ ಇಂಗ್ಲೆಂಡ್ ಪ್ರವಾಸದ ವೇಳೆ ಶತಕ ಸಿಡಿಸುವುದಾಗಿ ಉತ್ಸಾಹದಿಂದ ಹೇಳಿದ್ದರು.
ಇಷ್ಟೆಲ್ಲಾ ವಿಶ್ವಾಸದ ನಡುವೆಯೂ ಕೊಹ್ಲಿ ಏಕೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದರು ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ಬಿಸಿಸಿಐ ಒತ್ತಾಯ, ಉಲ್ಟಾ ಹೊಡೆದ ಟೀಂ ಮ್ಯಾನೇಜ್ ಮೆಂಟ್
ಇನ್ನು ಜೂನ್‌ನಲ್ಲಿ ಆರಂಭವಾಗಲಿರುವ ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಕೊಹ್ಲಿ ಆಡುವುದನ್ನು ಬಿಸಿಸಿಐ ಬಯಸಿತ್ತು. ಹೀಗಾಗಿ ಕೊಹ್ಲಿ ನಿವೃತ್ತಿ ವಿಚಾರ ಮುಂದಿಟ್ಟಾಗ ಬಿಸಿಸಿಐ ಮತ್ತು ಭಾರತದ ಇತರೆ ಹಿರಿಯ ಮಾಜಿ ಆಟಗಾರರು ಅವರನ್ನು ಮನವೊಲಿಸಲು ಮುಂದಾಗಿದ್ದರು ಎಂದು ಹೇಳಲಾಗಿದೆ.
ಬಾರ್ಡರ್ ಗವಾಸ್ಕರ್ ಸರಣಿ ಸೋಲಿನ ಬಳಿಕ ವಿರಾಟ್ ಕೊಹ್ಲಿಗೆ ನಾಯಕತ್ವ
ಈಗ, ವರದಿಯ ಪ್ರಕಾರ, ಡಿಸೆಂಬರ್-ಜನವರಿಯಲ್ಲಿ ನಡೆಯಲಿರುವ ಭಾರತದ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಮತ್ತೆ ಭಾರತೀಯ ಕ್ರಿಕೆಟ್ ತಂಡದ ಟೆಸ್ಟ್ ನಾಯಕರನ್ನಾಗಿ ಮಾಡಬಹುದೆಂಬ ಸುಳಿವು ನೀಡಲಾಗಿತ್ತು. ಸ್ಪೋರ್ಟ್ಸ್ ಟುಡೇ ವೀಡಿಯೊ ವರದಿಯಲ್ಲಿ, ಕೊಹ್ಲಿ ನಾಯಕತ್ವಕ್ಕೆ ಮರಳುವ ಬಗ್ಗೆ ಸುಳಿವು ನೀಡಲಾಗಿದೆ ಎಂದು ಹೇಳಲಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಸೋತ ನಂತರ ತಂಡದ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿತ್ತು.
ಕನಿಷ್ಠ ಪಕ್ಷ ಅಡಿಲೇಡ್ ಪಂದ್ಯದ ನಂತರ ಕೊಹ್ಲಿಗೆ ನಾಯಕತ್ವ ನೀಡಲಾಗುವುದು ಎಂಬ ಸುಳಿವು ನೀಡಲಾಗಿತ್ತು. ಆದರೆ ನಂತರ ವಿಷಯಗಳು ಬದಲಾದವು. ತಂಡದ ಆಡಳಿತ ಮಂಡಳಿ ಕೂಡ ಉಲ್ಟಾ ಹೊಡೆಯಿತು ಎಂದು ಹೇಳಲಾಗಿದೆ.
ಭಾರತ ಎ ಪಂದ್ಯಗಳನ್ನು ಆಡಬೇಕು ಎಂದಿದ್ದ ಕೊಹ್ಲಿ
ಇನ್ನು ಕೊಹ್ಲಿ ನಿವೃತ್ತಿಗೆ ಅಚ್ಚರಿ ವ್ಯಕ್ತಪಡಿಸಿರುವ ಮಾಜಿ ಭಾರತ ಕ್ರಿಕೆಟಿಗ ಮತ್ತು ದೆಹಲಿ ತಂಡದ ತರಬೇತುದಾರರೂ ಆಗಿರುವ ರಾಷ್ಟ್ರೀಯ ಆಯ್ಕೆದಾರ ಸರಣ್‌ದೀಪ್ ಸಿಂಗ್, 'ನಿವೃತ್ತಿಯ ಯಾವುದೇ ಸುಳಿವು ಇರಲಿಲ್ಲ. ಎಲ್ಲಿಂದಲೂ ಕೇಳಲಿಲ್ಲ. ಕೆಲವು ದಿನಗಳ ಹಿಂದೆ, ನಾನು ಅವರೊಂದಿಗೆ ಮಾತನಾಡುತ್ತಿದ್ದೆ. ಆದರೆ ಅವರು ಈ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಯಾವುದೇ ಸುಳಿವು ನನಗೆ ಸಿಗಲಿಲ್ಲ. ಅವರು ಹೊಂದಿರುವ ಐಪಿಎಲ್ ಪ್ರಕಾರ, ಅವರು ಅದ್ಭುತ ಫಾರ್ಮ್‌ನಲ್ಲಿದ್ದಾರೆ" ಎಂದು ಹೇಳಿದರು.
"ಟೆಸ್ಟ್ ಪಂದ್ಯಗಳ ಮೊದಲು ಅವರು ಕೌಂಟಿ ಕ್ರಿಕೆಟ್ ಆಡುತ್ತಾರೆಯೇ ಎಂದು ನಾನು ಅವರನ್ನು ಕೇಳಿದೆ. ಟೆಸ್ಟ್ ಸರಣಿ (ಇಂಗ್ಲೆಂಡ್ ವಿರುದ್ಧ) ಮೊದಲು ಎರಡು ಭಾರತ 'ಎ' ಪಂದ್ಯಗಳನ್ನು ಆಡಲು ಬಯಸುವುದಾಗಿ ಅವರು ಹೇಳಿದ್ದರು. ಅದು ಈಗಾಗಲೇ ಇತ್ಯರ್ಥವಾಗಿತ್ತು. ಇದ್ದಕ್ಕಿದ್ದಂತೆ, ಅವರು ಇನ್ನು ಮುಂದೆ ರೆಡ್ ಬಾಲ್ ಕ್ರಿಕೆಟ್ ಆಡುವುದಿಲ್ಲ ಎಂದು ಘೋಷಿಸಿದರು.
ಕೊಹ್ಲಿಗೆ ಯಾವುದೇ ಫಿಟ್‌ನೆಸ್ ಸಮಸ್ಯೆ ಇಲ್ಲ. ಫಾರ್ಮ್ ಸಮಸ್ಯೆ ಇಲ್ಲ. ಅವರು ಆಸ್ಟ್ರೇಲಿಯಾದಲ್ಲಿ ಒಂದು ಶತಕ ಗಳಿಸಿದ್ದರು, ಆದರೆ ಅವರು ತೃಪ್ತರಾಗಿರಲಿಲ್ಲ. ರಣಜಿ ಟ್ರೋಫಿಯ ಸಮಯದಲ್ಲಿ, ಅವರು ಇಂಗ್ಲೆಂಡ್‌ನಲ್ಲಿ ಮೂರು-ನಾಲ್ಕು ಶತಕಗಳನ್ನು ಗಳಿಸಲು ಬಯಸುತ್ತಿದ್ದರು. ಏಕೆಂದರೆ ಅವರು ತಂಡದ ಅತ್ಯಂತ ಹಿರಿಯ ಆಟಗಾರ ಎಂದು ಸರಣ್ ದೀಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.