ಜೈಪುರ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಗಳಿಸಿದ ಆಟಗಾರ ಎಂದರೆ ಅದು ರಾಜಸ್ತಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ (Vaibhav Suryavanshi)..
14 ವರ್ಷದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಆರಂಭದಲ್ಲಿ ತಮ್ಮ ವಯಸ್ಸಿನಿಂದಲೇ ಸುದ್ದಿಗೆ ಗ್ರಾಸವಾಗಿದ್ದರು. ಆದರೆ ಟೂರ್ನಿಯಲ್ಲಿ ದಾಖಲೆಯ ಶತಕ ಸಿಡಿಸುವ ಮೂಲಕ ಖ್ಯಾತಿಗಳಿಸಿದರು. ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಯ್ಲ್ ಬಳಿಕ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಅಲ್ಲದೆ ಐಪಿಎಲ್ ನಲ್ಲಿ ಶತಕ ಸಿಡಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದ ವೈಭವ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ 33 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 57 ರನ್ ಬಾರಿಸಿದರು. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ 7 ಇನಿಂಗ್ಸ್ಗಳಿಂದ ಒಟ್ಟು 252 ರನ್ ಕಲೆಹಾಕಿದ್ದಾರೆ.
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 18 ವರ್ಷಕ್ಕಿಂತ ಮುಂಚೆ 250 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. 18 ವರ್ಷ ತುಂಬುವ ಮುನ್ನ ಐಪಿಎಲ್ನಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿದ ಏಕೈಕ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
500 ಮಿಸ್ ಕಾಲ್, 4 ದಿನ ಫೋನ್ ಸ್ವಿಚ್ ಆಫ್..
ಹಾಲಿ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಲಯದಲ್ಲಿರುವ ವೈಭವ್ ಸೂರ್ಯವಂಶಿ ತಮ್ಮ ಆಟದ ಮೇಲೆ ಫೋಕಸ್ ಮಾಡಲು ಸಾಕಷ್ಟು ಹರಸಾಹಸವನ್ನೇ ಪಟ್ಟಿದ್ದಾರೆ. ಪ್ರಮುಖವಾಗಿ ತಮ್ಮ ಚೊಚ್ಚಲ ಶತಕದ ಬಳಿಕ ವೈಭವ್ ಸೂರ್ಯವಂಶಿಗೆ ಬರೊಬ್ಬರಿ 500 ಮಿಸ್ ಕಾಲ್ ಬಂದಿತ್ತಂತೆ. ಈ ಬಗ್ಗೆ ವೈಭವ್ ಕೂಡ ಥ್ರಿಲ್ ಆಗಿದ್ದರು. ಆದರೆ ಗುರು ರಾಹುಲ್ ದ್ರಾವಿಡ್ ಅವರ ಭಯದಿಂದ ವೈಭವ್ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಬದಲಿಗೆ 4 ದಿನಗಳ ತಮ್ಮ ಮೊಬೈಲ್ ಅನ್ನೇ ಸ್ವಿಚ್ ಆಫ್ ಮಾಡಿದ್ದರಂತೆ.
ಈ ಬಗ್ಗೆ ಮಾತನಾಡಿದ್ದ ವೈಭವ್, '"ನಾನು 3-4 ವರ್ಷಗಳಿಂದ ತಯಾರಿ ನಡೆಸುತ್ತಿದ್ದೇನೆ. ಫಲಿತಾಂಶಗಳನ್ನು ಸಹ ನಾನು ನೋಡಿದೆ. ಏನೇ ಕೊರತೆಯಿದ್ದರೂ, ನಾನು ಅದರ ಮೇಲೆ ಕೆಲಸ ಮಾಡಲು ಸಾಧ್ಯವಾಯಿತು. ಒಂದು ಕಾಲದಲ್ಲಿ ಕಠಿಣವೆಂದು ಕಾಣುತ್ತಿದ್ದ ಎಲ್ಲಾ ವಿಷಯಗಳು ಸುಲಭವಾದವು. ಗಮನಹರಿಸುವುದು ಮುಖ್ಯ ಎಂದು ನಾನು ಅರಿತುಕೊಂಡೆ. ನೈಸರ್ಗಿಕ ಆಟ ಎಂಬುದೇ ಇಲ್ಲ. ತಂಡಕ್ಕೆ ಏನು ಬೇಕೋ ಅದಕ್ಕೆ ಅನುಗುಣವಾಗಿ ನೀವು ಆಡಬೇಕು. ಈ ಮಟ್ಟದಲ್ಲಿ ಹೆಚ್ಚು ಹೆಚ್ಚುವರಿ ಕೆಲಸಗಳನ್ನು ಮಾಡಲು ಪ್ರಯತ್ನಿಸಬೇಡಿ. ನಾನು ನನ್ನ ಬಲವಾದ ವಲಯದಲ್ಲಿ ಉಳಿಯಬೇಕು ಮತ್ತು ತಂಡವನ್ನು ಗೆಲ್ಲಿಸಬೇಕು" ಎಂದು ಹೇಳಿದರು.
ಅಂತೆಯೇ "ನನಗೆ 500 ಕ್ಕೂ ಹೆಚ್ಚು ಮಿಸ್ಡ್ ಕಾಲ್‌ಗಳು ಬಂದಿದ್ದವು, ಆದರೆ ನಾನು ನನ್ನ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದೆ. ನಾನು ಶತಕ ಗಳಿಸಿದ ನಂತರ ಬಹಳಷ್ಟು ಜನರು ನನ್ನನ್ನು ಸಂಪರ್ಕಿಸುತ್ತಿದ್ದರು. ಆದರೆ ನನಗೆ ಅದು ಇಷ್ಟವಿರಲಿಲ್ಲ. ನಾನು ದೂರವಿರಲು ಪ್ರಯತ್ನಿಸುತ್ತೇನೆ. ನಾನು 4 ದಿನಗಳ ಕಾಲ ನನ್ನ ಫೋನ್ ಅನ್ನು ಆಫ್ ಮಾಡಿದ್ದೆ. ಮನೆಯಲ್ಲಿ ನನ್ನ ಕುಟುಂಬಸ್ಥರು ಮತ್ತು ಕೆಲವು ಸ್ನೇಹಿತರ ಸುತ್ತಲೂ ಇರುವುದು ನನಗೆ ಇಷ್ಟ' ಎಂದು ವೈಭವ್ ಹೇಳಿದ್ದಾರೆ.
ಇಂಗ್ಲೆಂಡ್ ಪ್ರವಾಸ
ಇನ್ನು ಹಾಲಿ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಜರ್ನಿ ಮುಕ್ತಾಯವಾಗಿದ್ದು, ತಂಡ ಇನ್ನೇನಿದ್ದರೂ ಮುಂದಿನ ವರ್ಷದ ಆವೃತ್ತಿಗೆ ತಂಡ ಸಿದ್ಧಪಡಿಸಬೇಕಿದೆ. ಅಂತೆಯೇ ವೈಭವ್ ಸೂರ್ಯವಂಶಿ ಕೂಡ ತಮ್ಮ ಮುಂದಿನ ಕಾರ್ಯಯೋಜನೆಯ ಮೇಲೆ ತಮ್ಮ ಎಲ್ಲಾ ಗಮನ ಮತ್ತು ಶಕ್ತಿಯನ್ನು ಹರಿಸಲು ಸಜ್ಜಾಗುತ್ತಿದ್ದಾರೆ.
ಸೂರ್ಯವಂಶಿ ಈಗಾಗಲೇ ಅಂಡರ್-19 'ಟೆಸ್ಟ್'ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು ಮುಂದಿನ ತಿಂಗಳು ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಅಲ್ಲಿ, ಭಾರತ ಅಂಡರ್-19 ತಂಡವು ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧ ಐದು ಏಕದಿನ ಪಂದ್ಯಗಳು ಮತ್ತು ಮೂರು ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳಲ್ಲಿ ಸ್ಪರ್ಧಿಸಲಿದೆ.
ಈ ಪ್ರವಾಸವು ಯುವ ಪ್ರತಿಭೆಗೆ ಅಮೂಲ್ಯವಾದ ಕಲಿಕೆಯ ಅನುಭವವಾಗಲಿದೆ. ಇದು ಅವರನ್ನು ಪರಿಚಯವಿಲ್ಲದ ಆಟದ ಪರಿಸ್ಥಿತಿಗಳಿಗೆ ಒಡ್ಡುತ್ತದೆ.
ಕೋಚ್ ರಾಹುಲ್ ದ್ರಾವಿಡ್ ಎಚ್ಚರಿಕೆ
ಹಾಲಿ ಐಪಿಎಲ್ ಟೂರ್ನಿಯ ಪ್ರದರ್ಶನದಿಂದಾಗಿ ವೈಭವ್ ಸೂರ್ಯವಂಶಿ ಮುಂದಿನ ವರ್ಷ ಐಪಿಎಲ್‌ಗೆ ಮರಳಿದಾಗ, ದ್ರಾವಿಡ್ ಅವರು ವಿಶೇಷವಾಗಿ ಎದುರಾಳಿ ಬೌಲರ್‌ಗಳಿಂದ ತೀವ್ರ ಪರಿಶೀಲನೆಗೆ ಒಳಗಾಗುತ್ತಾರೆ ಎಂದು ರಾಜಸ್ತಾನ ತಂಡದ ಕೋಚ್ ಎಚ್ಚರಿಸಿದ್ದಾರೆ.
'ಇದು ಉತ್ತಮ ಋತುವಾಗಿತ್ತು. ನೀವು ಮಾಡಿದ್ದನ್ನು ಮಾಡುತ್ತಲೇ ಇರಿ, ಚೆನ್ನಾಗಿ ಆಡಿ, ಚೆನ್ನಾಗಿ ಅಭ್ಯಾಸ ಮಾಡಿ. ಆದರೆ ಮುಂದಿನ ವರ್ಷ, ಎದುರಾಳಿ ತಂಡಗಳ ಬೌಲರ್‌ಗಳು ನಿಮ್ಮ ವಿರುದ್ಧ ಹೆಚ್ಚು ಸಿದ್ಧರಾಗಿ ಬರುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ನಾವು ಕೂಡ ತಯಾರಿ ನಡೆಸಬೇಕು. ಕಠಿಣ ತರಬೇತಿ ನೀಡಬೇಕು ಮತ್ತು ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಚೆನ್ನಾಗಿ ಆಡಿದ್ದೀರಿ," ಎಂದು ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ವೈಭವ್ ಸೂರ್ಯವಂಶಿಗೆ ಎಚ್ಚರಿಕೆ ನೀಡಿದ್ದಾರೆ.