ಭಾರತ ತಂಡವು ತನ್ನ ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನ ಮೂಕವಿಸ್ಮಿತರಾದರು. ಕಳೆದ ಎರಡು ಐಸಿಸಿ ಫೈನಲ್‌ಗಳಲ್ಲಿ ಸೋಲು ಕಂಡಿದ್ದ ಭಾರತ ತಂಡವು ಅಂತಿಮವಾಗಿ ತವರಿನ ಪ್ರೇಕ್ಷಕರ ಮುಂದೆಯೇ ಕಪ್ ಎತ್ತಿ ಸಂಭ್ರಮಾಚರಿಸಿತು.
ನಿರೀಕ್ಷೆಯಂತೆ, ಉಭಯ ತಂಡದ ಆಟಗಾರರ ಕಣ್ಣುಗಳು ತೇವಗೊಂಡಿದ್ದವು. ಸೋತ ನೋವಿನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ್ತಿಯರು ಭಾವುಕರಾದರೆ, ಗೆದ್ದ ಭಾರತ ತಂಡದ ಆಟಗಾರ್ತಿಯರು ಕೂಡ ಕಣ್ಣೀರಾಕಿದ್ದು ಕಂಡುಬಂತು. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವುದು ಹೇಗನಿಸಿತು ಎಂದು ಸ್ಮೃತಿ ಅವರನ್ನು ಕೇಳಿದಾಗ, 'ವಿಶ್ವ ಚಾಂಪಿಯನ್ ಆಗಿದ್ದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿಲ್ಲ! ನನಗೆ ಅದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ!' ಎಂದು ಪಂದ್ಯದ ನಂತರ ಹೇಳಿದರು.
'2017ರಲ್ಲಿ ಇಂಗ್ಲೆಂಡ್ ಮತ್ತು 2020ರಲ್ಲಿ ಆಸ್ಟ್ರೇಲಿಯಾ ತಂಡಗಳ ವಿರುದ್ಧದ ಹೃದಯವಿದ್ರಾವಕ ಸೋಲಿನ ನಂತರ ಹಲವು ನಿದ್ದೆಯಿಲ್ಲದ ರಾತ್ರಿಗಳು ಇದ್ದವು. 2025ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ನಂತರ, ಆ ಎಲ್ಲ ನೋವು ಈ ಕ್ಷಣಕ್ಕೆ ಸಾರ್ಥಕವಾಗಿದೆ' ಎಂದು ಹೇಳಿದ್ದಾರೆ.
'ಈ ಹಿಂದಿನ ಪ್ರತಿಯೊಂದು ವಿಶ್ವಕಪ್‌ನಲ್ಲೂ, ನಮಗೆಲ್ಲರಿಗೂ ಹಲವಾರು ಹೃದಯ ವಿದ್ರಾವಕ ಘಟನೆಗಳು ನಡೆದಿವೆ. ಆದರೆ, ನಮಗೆ ಯಾವಾಗಲೂ ದೊಡ್ಡ ಜವಾಬ್ದಾರಿ ಇದೆ ಎಂದು ನಾವು ನಂಬಿದ್ದೆವು. ಗೆಲ್ಲುವುದು ಮಾತ್ರವಲ್ಲ, ಮಹಿಳಾ ಕ್ರಿಕೆಟ್ ಅನ್ನು ಬೆಳೆಸುವುದನ್ನು ಮುಂದುವರಿಸುವುದು. ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದ ಒಂದೂವರೆ ತಿಂಗಳಿನಿಂದ ನಮಗೆ ದೊರೆತ ಬೆಂಬಲವನ್ನು ನೋಡಿ ಹೀಗನ್ನಿಸಿತು. ಇದು ಅದ್ಭುತವಾಗಿದೆ. ಇಂದು ಅಂತಿಮವಾಗಿ ವಿಶ್ವಕಪ್ ಅನ್ನು ಎತ್ತಿ ಹಿಡಿದಾಗ ನಿದ್ದೆಯಿಲ್ಲದ ಆ 45 ರಾತ್ರಿಗಳನ್ನು ಕಳೆದಿದ್ದು ಸಾರ್ಥಕ ಎನಿಸಿತು. ಕಳೆದ ಬಾರಿಯ ವಿಶ್ವಕಪ್‌ನಲ್ಲಿನ ಸೋಲನ್ನು ತೆಗೆದುಕೊಳ್ಳುವುದು ನಮಗೆಲ್ಲರಿಗೂ ಖಂಡಿತವಾಗಿಯೂ ಕಷ್ಟಕರವಾಗಿತ್ತು. ಆದರೆ, ಅದರ ನಂತರ, ಪ್ರತಿಯೊಂದು ಕ್ಷೇತ್ರದಲ್ಲೂ ಫಿಟ್, ಬಲಶಾಲಿ ಮತ್ತು ಉತ್ತಮವಾಗುವುದರತ್ತ ನಮ್ಮ ಸ್ಪಷ್ಟ ಗಮನವಿತ್ತು' ಎಂದು ಅವರು ಹೇಳಿದರು.
'ಈ ತಂಡದ ವಿಶೇಷತೆ ಏನೆಂದರೆ, ಯಾರೂ ಅದರ ಬಗ್ಗೆ ನಿಜವಾಗಿಯೂ ಮಾತನಾಡುವುದಿಲ್ಲ. ಇದು ನಾವು ಎಷ್ಟರ ಮಟ್ಟಿಗೆ ಒಂದಾಗಿ ಇದ್ದೆವು ಎಂಬುದನ್ನು ತಿಳಿಸುತ್ತದೆ. ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳಲ್ಲಿ ಎಲ್ಲರೂ ಪರಸ್ಪರ ಬೆಂಬಲಿಸಿದರು. ನಾವು ಪರಸ್ಪರರ ಯಶಸ್ಸನ್ನು ನಿಜವಾಗಿಯೂ ಆಚರಿಸಿದೆವು. ಈ ಬಾರಿ ತಂಡದ ವಾತಾವರಣ ತುಂಬಾ ಸಕಾರಾತ್ಮಕವಾಗಿತ್ತು, ಸಂಪರ್ಕ ಹೊಂದಿತ್ತು. ಅದು ದೊಡ್ಡ ವ್ಯತ್ಯಾಸವಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ತಿಳಿಸಿದರು.