ಕ್ವೀನ್ಸ್ ಲ್ಯಾಂಡ್: 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 48 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಆಸ್ಚ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಕರಾರ ಓವಲ್ ಕ್ರೀಡಾಂಗಣದಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 168 ರನ್ ಗಳ ಬೆನ್ನು ಹತ್ತಿದ ಆಸ್ಟ್ರೇಲಿಯಾ 119 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 48 ರನ್ ಗಳ ಅಂತರದಲ್ಲಿ ಭಾರತದ ಎದುರು ಮಂಡಿಯೂರಿತು.
ಭಾರತದ ಪರ ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರೆ, ಶಿವಂ ದುಬೆ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದರೆ, ಅರ್ಶ್ ದೀಪ್ ಸಿಂಗ್, ಜಸ್ ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ ವಿಕೆಟ್ ಪಡೆದರು.
ಉತ್ತಮ ಆರಂಭ ಪಡೆದ ಆಸ್ಟ್ರೇಲಿಯಾ
ಇನ್ನು ಭಾರತ ನೀಡಿದ್ದ 168 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿತ್ತು. ಮೊದಲ ವಿಕೆಟ್ ಗೆ ನಾಯಕ ಮಿಚೆಲ್ ಮಾರ್ಶ್ ಮತ್ತು ಮ್ಯಾಥ್ಯೂ ಶಾರ್ಟ್ ಜೋಡಿ 37 ರನ್ ಕಲೆಹಾಕಿತ್ತು. ಮಾರ್ಶ್ (30) ಮತ್ತು ಶಾರ್ಟ್ (25) ಔಟಾದ ಬಳಿಕ ಆಸಿಸ್ ಬ್ಯಾಟಿಂಗ್ ಮಂಕಾಯಿತು. ಜಾಶ್ ಇಂಗ್ಲಿಶ್ 12 ರನ್ ಗಳಿಸಿ ಔಟಾದರೆ, ಟಿಮ್ ಡೇವಿಡ್ 14, ಜಾಶ್ ಫಿಲಿಪ್ 10, ಮಾರ್ಕಸ್ ಸ್ಟಾಯ್ನಿಸ್ 17 ರನ್ ಮಾತ್ರ ಗಳಿಸಿದರು.
ಗ್ಲೇನ್ ಮ್ಯಾಕ್ಸ್ ವೆಲ್ (2), ಡ್ವಾರ್ಶ್ಯೂಯಿಸ್ (5), ಬಾರ್ಟ್ಲೆಟ್ (0), ಆ್ಯಡಂ ಜಂಪಾ (0) ಬ್ಯಾಟಿಂಗ್ ವೈಫಲ್ಯ ತಂಡಕ್ಕೆ ಮುಳುವಾಯಿತು. ಅಂತಿಮವಾಗಿ ಆಸ್ಟ್ರೇಲಿಯಾ 18.2 ಓವರ್ ನಲ್ಲಿ ಕೇವಲ 119 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 48ರನ್ ಅಂತರದಲ್ಲಿ ಸೋಲು ಕಂಡಿತು.
ಭಾರತದ ಪರ ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರೆ, ಶಿವಂ ದುಬೆ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದರು. ಅರ್ಶ್ ದೀಪ್ ಸಿಂಗ್, ಜಸ್ ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ ವಿಕೆಟ್ ಪಡೆದರು.
ಟಿ20 ಸರಣಿಯಲ್ಲಿ 2-1 ಮುನ್ನಡೆ
ಇನ್ನು 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸರಣಿಯ 5ನೇ ಹಾಗೂ ಅಂತಿಮ ಪಂದ್ಯ ಗಬ್ಬಾದಲ್ಲಿ ನವೆಂಬರ್ 8 ಶನಿವಾರ ನಡೆಯಲಿದೆ.