ಏಷ್ಯಾ ಕಪ್ ಜಗಳ ಇನ್ನಷ್ಟು ತೀವ್ರಗೊಳ್ಳಲಿದೆ. ಭಾರತ ಕ್ರಿಕೆಟ್ ತಂಡವು ಕಾಂಟಿನೆಂಟಲ್ ಈವೆಂಟ್ ಅನ್ನು ಗೆದ್ದು ಆರು ವಾರಗಳೇ ಕಳೆದಿವೆ. ಆದರೆ, ತಂಡಕ್ಕೆ ಇನ್ನೂ ಟ್ರೋಫಿ ತಲುಪಿಲ್ಲ. ಸೆಪ್ಟೆಂಬರ್ 28 ರಂದು ನಡೆದ ಏಷ್ಯಾ ಕಪ್ 2025ರ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿದ ನಂತರ, ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಬಳಿಕ ನಖ್ವಿ ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಮೈದಾನ ತೊರೆದಿದ್ದರು.
ಈ ವಾರ ದುಬೈನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಭೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಏಷ್ಯಾ ಕಪ್ ಸಮಯದಲ್ಲಿ ನಖ್ವಿ ಅವರ ನಡವಳಿಕೆಯನ್ನು ಮತ್ತು ಐಸಿಸಿ ಆಡಳಿತ ನಿಯಮಗಳನ್ನು ಉಲ್ಲಂಘಿಸುವ ಪಾಕಿಸ್ತಾನದ ಆಂತರಿಕ ಸಚಿವರಾಗಿ ಅವರ ದ್ವಿಪಾತ್ರವನ್ನು ಪ್ರಶ್ನಿಸಲಿದೆ ಎಂದು ವರದಿಯೊಂದು ತಿಳಿಸಿದೆ.
ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಟೆಲಿಕಾಂ ಏಷ್ಯಾ ಸ್ಪೋರ್ಟ್ ವರದಿ ಮಾಡಿದ್ದು, 'ಬಿಸಿಸಿಐ ನಖ್ವಿ ವಿರುದ್ಧದ ಆರೋಪಗಳ ಪಟ್ಟಿಯನ್ನು ಸಂಗ್ರಹಿಸಿದೆ ಮತ್ತು ಎರಡು ಸಾರ್ವಜನಿಕ ಮತ್ತು ಕ್ರೀಡಾ ಹುದ್ದೆಗಳನ್ನು ಹೊಂದಲು ಅವರ ಅರ್ಹತೆಯನ್ನು ಪ್ರಶ್ನಿಸಲು ಉದ್ದೇಶಿಸಿದೆ. ಬಿಸಿಸಿಐಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ACB) ಬೆಂಬಲವಿರುತ್ತದೆ' ಎಂದು ಹೇಳಿದೆ.
ಇತ್ತೀಚಿನ ಮಿಲಿಟರಿ ದಾಳಿಯಲ್ಲಿ ಮೂವರು ಆಫ್ಘನ್ ದೇಶೀಯ ಆಟಗಾರರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದ್ದು, ಬಳಿಕ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಸಂಬಂಧಗಳು ಹದಗೆಟ್ಟಿವೆ. ಇದರಿಂದಾಗಿ ಪಾಕಿಸ್ತಾನದಲ್ಲಿ ನಡೆಯಲಿರುವ ತ್ರಿಕೋನ ಸರಣಿಯಿಂದ ಅಫ್ಘಾನಿಸ್ತಾನ ಹಿಂದೆ ಸರಿಯಿತು.
IANS ನ ಮತ್ತೊಂದು ವರದಿಯು ಇದೇ ರೀತಿಯ ಬೆಳವಣಿಗೆಯನ್ನು ತಿಳಿಸಿದೆ. 'ಶುಕ್ರವಾರ ಎಲ್ಲ ಮಂಡಳಿಯ ಮುಖ್ಯಸ್ಥರು ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಏಷ್ಯಾ ಕಪ್ ಟ್ರೋಫಿ ಹಸ್ತಾಂತರ ವಿಷಯವನ್ನು ಬಿಸಿಸಿಐ ಅಲ್ಲಿ ಪ್ರಸ್ತಾಪಿಸಲಿದೆ. ACC ಗೆ ಔಪಚಾರಿಕ ಪತ್ರ ಬರೆದಿದ್ದರೂ, ಟ್ರೋಫಿ ಹಸ್ತಾಂತರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಬಂದಿಲ್ಲ' ಎಂದು ಮೂಲವೊಂದು ತಿಳಿಸಿದೆ.
ನವೆಂಬರ್ 1 ರಂದು ಐಎಎನ್‌ಎಸ್ ಜೊತೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಐಸಿಸಿ ತ್ರೈಮಾಸಿಕ ಸಭೆಗಳಲ್ಲಿ ಟ್ರೋಫಿ ಹಸ್ತಾಂತರ ವಿಳಂಬದ ಬಗ್ಗೆ ದೂರು ಸಲ್ಲಿಸುವ ಯೋಜನೆಯನ್ನು ಸೂಚಿಸಿದ್ದರು ಮತ್ತು ಈ ವಿಷಯದ ಕುರಿತು 10 ದಿನಗಳ ಹಿಂದೆ ಎಸಿಸಿಗೆ ಪತ್ರವನ್ನು ಕಳುಹಿಸಲಾಗಿತ್ತು ಎಂದು ಹೇಳಿದರು.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಸಲ್ಮಾನ್ ಅಘಾ ಅವರ ಪಾಕಿಸ್ತಾನ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಒಂಬತ್ತನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಂದಿನಿಂದ ಟ್ರೋಫಿ ಬಿಕ್ಕಟ್ಟು ಎದುರಾಗಿದೆ.