ಭಾರತ ಕ್ರಿಕೆಟ್ ತಂಡದ ಮಾಜಿ ತಾರೆ ವೆಂಕಟೇಶ್ ಪ್ರಸಾದ್ ಅವರು ಕೆಎಸ್‌ಸಿಎ ಅಧ್ಯಕ್ಷರಾಗಿ ಆಯ್ಕೆಯಾದರೆ, ಮೂಲಸೌಕರ್ಯಗಳನ್ನು ಸುಧಾರಿಸುವುದು ಮತ್ತು ರಾಜ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಮರಳಿ ತರುವುದರ ಮೇಲೆ ತಮ್ಮ ಗಮನ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ. ಐಪಿಎಲ್ 2025ನೇ ಆವೃತ್ತಿಯಲ್ಲಿ ಆರ್‌ಸಿಬಿ ಗೆಲುವಿನ ನಂತರ ನಡೆದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದ ಬಳಿಕ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೊಡ್ಡ ಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸಲು ಸೂಕ್ತವಲ್ಲ ಎಂದು ಹೇಳಲಾಗಿದೆ. 2026ರ ಟಿ20 ವಿಶ್ವಕಪ್ ಪಂದ್ಯಗಳಿಗೂ ಕ್ರೀಡಾಂಗಣವನ್ನು ಪರಿಗಣಿಸಿಲ್ಲ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ವೆಂಕಟೇಶ್ ಪ್ರಸಾದ್, ಸಂಘ ಮತ್ತು ಯುವಕರಿಗೆ ಅದನ್ನು ಮರಳಿ ನೀಡುವ ಜವಾಬ್ದಾರಿ ನನ್ನ ಮೇಲಿದೆ. ಸದ್ಯ ರಾಜ್ಯದಲ್ಲಿ ಮೂಲಸೌಕರ್ಯ, ಡ್ರೆಸ್ಸಿಂಗ್ ರೂಂ ಮತ್ತು ಸೌಲಭ್ಯಗಳು ಶಿಥಿಲಗೊಂಡಿವೆ. ಬೆಂಗಳೂರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಮರಳಿ ತರುವುದೇ ನನ್ನ ಆದ್ಯತೆ ಎಂದರು. ಕೆಎಸ್‌ಸಿಎ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿರುವ ವೆಂಕಟೇಶ್ ಪ್ರಸಾದ್ ಅವರನ್ನು ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಬೆಂಬಲಿಸಿದ್ದಾರೆ.
'ಮೂಲಸೌಕರ್ಯ, ಡ್ರೆಸ್ಸಿಂಗ್ ಕೊಠಡಿ ಮತ್ತು ಸೌಲಭ್ಯಗಳನ್ನು ನಾವು ಅಭಿವೃದ್ಧಿಪಡಿಸಬೇಕು ಮತ್ತು ಹೆಚ್ಚಿನ ಮೈದಾನಗಳನ್ನು ತರಲು ಮತ್ತು ಆಟವನ್ನು ರಚನಾತ್ಮಕ ರೀತಿಯಲ್ಲಿ ಸಂಘಟಿಸಲು ಹೆಚ್ಚಿನ ಅವಕಾಶವನ್ನು ನೀಡಬೇಕು. ಅದನ್ನೇ ನಾವು ಮಾಡಲು ಯೋಜಿಸುತ್ತಿದ್ದೇವೆ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಅಂತರರಾಷ್ಟ್ರೀಯ ಪಂದ್ಯಗಳು ಮತ್ತೆ ಬೆಂಗಳೂರಿನಲ್ಲಿ ನಡೆಯುವಂತೆ ಮಾಡಬೇಕಾಗಿದೆ. ನಾನು ಆ ವೈಭವವನ್ನು ಪುನರುಜ್ಜೀವನಗೊಳಿಸಲು ಬಯಸುತ್ತೇವೆ' ಎಂದು ಪ್ರಸಾದ್ ಹೇಳಿದರು.
ಕುಂಬ್ಳೆ ಮಾತನಾಡಿ, ಕರ್ನಾಟಕ ಕ್ರಿಕೆಟ್ ಸದ್ಯ ಸಂಕಷ್ಟದಲ್ಲಿದೆ. ನಾವೆಲ್ಲರೂ ಇಲ್ಲಿ ಕ್ರಿಕೆಟ್‌ಗಾಗಿ ಒಟ್ಟುಗೂಡಿದ್ದೇವೆ ಎಂಬುದು ಮುಖ್ಯ. ಈ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ ವೆಂಕಿಗೆ ಹ್ಯಾಟ್ಸ್‌ಆಫ್. ಕರ್ನಾಟಕ ಕ್ರಿಕೆಟ್ ಬಳಲುತ್ತಿದೆ ಎಂದು ನಾವು ಭಾವಿಸುವುದರಿಂದ ಮತ್ತು ನಾವು ಬದಲಾವಣೆಯನ್ನು ತರಲು ಬಯಸುವುದರಿಂದ ನಾವು ಇಲ್ಲಿದ್ದೇವೆ' ಎಂದು ಕುಂಬ್ಳೆ ಹೇಳಿದರು.
ಜಾವಗಲ್ ಶ್ರೀನಾಥ್, ಕೆಎಸ್‌ಸಿಎ ಕ್ರಿಕೆಟ್‌ಗೆ ಮರಳುವ ಸಮಯ ಬಂದಿದೆ ಎಂದು ಹೇಳಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸ್ಥಾನಕ್ಕೆ ವಿನಯ್ ಮೃತ್ಯುಂಜಯ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎವಿ ಶ್ರೀಧರ್ ಮತ್ತು ಖಜಾಂಚಿ ಸ್ಥಾನಕ್ಕೆ ಬಿಎನ್ ಮಧುಕರ್ ಸ್ಪರ್ಧಿಸುತ್ತಿದ್ದಾರೆ.