ಕೋಲ್ಕತಾ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ವೇಗಿ ಜಸ್ ಪ್ರೀತ್ ಬುಮ್ರಾ ಆರ್ ಅಶ್ವಿನ್ ರ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.
ಕೋಲ್ಕತಾದ ಈಡೆನ್ ಗಾರ್ಡೆನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಕೇವಲ 159 ರನ್ ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಪರ ಮಾರ್ಕ್ರಾಮ್ ಗಳಿಸಿದ 31 ರನ್ ಗಳ ತಂಡದ ವೈಯುಕ್ತಿಕ ಗರಿಷ್ಠ ರನ್ ಆಗಿದೆ.
ಭಾರತದ ಪರ ಮಾರಕ ಬೌಲಿಂಗ್ ಮಾಡಿದ ಜಸ್ ಪ್ರೀತ್ ಬುಮ್ರಾ, ಕೇವಲ 27 ರನ್ ಗಳನ್ನು ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮಹಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ 1 ವಿಕೆಟ್ ಪಡೆದರು.
ಆರ್ ಅಶ್ವಿನ್ ದಾಖಲೆ ಧೂಳಿಪಟ
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ನ 11ನೇ ಓವರ್ ಬೌಲ್ ಮಾಡಲು ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಆರಂಭಿಕ ರಯಾನ್ ರಿಕಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು. ಈ ವಿಕೆಟ್‌ನೊಂದಿಗೆ, ಬುಮ್ರಾ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಅವರ ದಾಖಲೆಯನ್ನು ಮುರಿದರು.
ರಿಯಾನ್ ವಿಕೆಟ್ ಪಡೆಯುವ ಮೂಲಕ ಜಸ್ಪ್ರೀತ್ ಬುಮ್ರಾ, ಅಶ್ವಿನ್ ಅವರನ್ನು ಹಿಂದಿಕ್ಕಿ ಭಾರತೀಯ ಕ್ರಿಕೆಟ್‌ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಬುಮ್ರಾ ಇದುವರೆಗೆ 152 ವಿಕೆಟ್‌ಗಳನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪಡೆದಿದ್ದಾರೆ.
ಈ ಮೂಲಕ ಮೂಲಕ 151 ವಿಕೆಟ್ ಪಡೆದಿದ್ದ ಅಶ್ವಿನ್ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕುಂಬ್ಳೆ 186 ವಿಕೆಟ್‌ಗಳನ್ನು ಪಡೆದಿದ್ದರೆ, ಕಪಿಲ್ ದೇವ್ 167 ಕ್ಲೀನ್ ಬೌಲ್ಡ್ ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದು ಮಾತ್ರವಲ್ಲದೆ ಈ ಪಂದ್ಯದಲ್ಲಿ ಆರಂಭಿಕರಿಬ್ಬರನ್ನು ಔಟ್ ಮಾಡುವ ಮೂಲಕ ಬುಮ್ರಾ, 2018 ರಿಂದ ಈ ಸ್ವರೂಪದಲ್ಲಿ ಅತಿ ಹೆಚ್ಚು ಎದುರಾಳಿ ಆರಂಭಿಕರನ್ನು (13) ಔಟ್ ಮಾಡಿದ ದಾಖಲೆ ನಿರ್ಮಿಸಿದರು. ಇದಕ್ಕೂ ಮೊದಲು, ಈ ದಾಖಲೆಯನ್ನು ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಹೊಂದಿದ್ದರು, ಅವರು ಆರಂಭಿಕರನ್ನು 12 ಬಾರಿ ಔಟ್ ಮಾಡಿದ್ದರು.