ಕೋಲ್ಕತಾ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್ ಗಳ ಹೀನಾಯ ಸೋಲು ಕಂಡಿದ್ದು, ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ತನ್ನ ಕೈಯಾರೆ ಹಾಳು ಮಾಡಿಕೊಂಡಿದೆ.
ಹೌದು.. ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಘಾತಕಾರಿ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ನೀಡಿದ್ದ 123 ರನ್ ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 93 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 30 ರನ್ ಗಳ ಹೀನಾಯ ಸೋಲು ದಾಖಲಿಸಿತು.
ಈ ಗೆಲುವಿನೊಂದಿಗೆ ಆಫ್ರಿಕಾ ಪಡೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಸವಾಲೇ ಅಲ್ಲದ ಮೊತ್ತವನ್ನು ಬೆನ್ನು ಹತ್ತಿದ ಭಾರತಕ್ಕೆ ತಂಡದ ಅತಿಯಾದ ಆತ್ಮವಿಶ್ವಾಸವೇ ಮಾರಕವಾಯಿತು. ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ (1) ಮತ್ತು ಯಶಸ್ವಿ ಜೈಸ್ವಾಲ್ (0) ನಿರಾಶೆ ಮೂಡಿಸಿದರು. ಇಬ್ಬರೂ ಒಂದಂಕಿ ಮೊತ್ತಕ್ಕೆ ಔಟಾದರು.
ಬಳಿಕ ವಾಷಿಂಗ್ಟನ್ ಸುಂದರ್ (31) ಮತ್ತು ಧ್ರುವ್ ಜುರೆಲ್ (13) ಕೊಂಚ ಪ್ರತಿರೋಧ ತೋರಿದರೂ ಮರ್ಕ್ರಾಮ್ ಬೌಲಿಂಗ್ ನಲ್ಲಿ ಔಟಾದರು. ರವೀಂದ್ರ ಜಡೇಜಾ 18, ಅಕ್ಸರ್ ಪಟೇಲ್ 26 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರೂ ಆಫ್ರಿಕನ್ ಬೌಲರ್ ಗಳ ಆರ್ಭಟದ ಎದುರು ಇವರೂ ಕೂಡ ಮಂಕಾಗಿ ವಿಕೆಟ್ ಒಪ್ಪಿಸಿದರು.
ಕೆಳ ಕ್ರಮಾಂಕದ ಪೆವಿಲಿಯನ್ ಪರೇಡ್
ಇನ್ನು ಬಳಿಕ ಕೆಳ ಕ್ರಮಾಂಕದಲ್ಲಿ ಬಂದ ಕುಲದೀಪ್ ಯಾದವ್ (1), ಮಹಮದ್ ಸಿರಾಜ್ ಶೂನ್ಯಕ್ಕೆ ಔಟಾದರು. ಈ ಹಂತದಲ್ಲಿ ಶುಭ್ ಮನ್ ಗಿಲ್ ಗಾಯದಿಂದ ಹೊರಗುಳಿದಿದ್ದರಿಂದ ಅವರನ್ನು ರೈಟರ್ಡ್ ಔಟ್ ಎಂದು ಪರಿಗಣಿಸಿ ಆಫ್ರಿಕಾ ತಂಡಕ್ಕೆ ಗೆಲುವು ನೀಡಲಾಯಿತು.
ಆಫ್ರಿಕನ್ ಬೌಲರ್ ಗಳ ಪರಾಕ್ರಮ
ಮತ್ತೊಂದೆಡೆ ಅಲ್ಪ ಮೊತ್ತದ ಹೊರತಾಗಿಯೂ ದೃತಿಗೆಡದ ಆಫ್ರಿಕನ್ ಬೌಲರ್ ಗಳು ಆರಂಭದಿಂದಲೇ ವಿಕೆಟ್ ಪಡೆಯುತ್ತಾ ಭಾರತೀಯ ಬ್ಯಾಟರ್ ಗಳನ್ನು ಕಾಡತೊಡಗಿದರು. ಭಾರತ ಖಾತೆ ತೆರೆಯುವ ಮುನ್ನವೇ ಜೈಸ್ವಾಲ್ ಔಟಾದರೆ, 1 ರನ್ ಗಳಿಸಿ ರಾಹುಲ್ ಕೂಡ ಔಟಾದರು. ರಿಷಬ್ ಪಂತ್ ಮತ್ತು ಕುಲದೀಪ್ ಯಾದವ್ ರನ್ನು ಹಾರ್ಮರ್ ಎಲ್ ಬಿ ಬಲೆಗೆ ಕೆಡವಿ ಭಾರತಕ್ಕೆ ಮರ್ಮಾಘಾತ ನೀಡಿದರು.
ದಕ್ಷಿಣ ಆಫ್ರಿಕಾ ಪರ ಹಾರ್ಮರ್ 4, ಜೇನ್ಸನ್ ಮತ್ತು ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರೆ, ಮರ್ಕ್ರಾಮ್ ಒಂದು ವಿಕೆಟ್ ಪಡೆದರು.