ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯ ಎತಿಹಾಡ್ ಅರೆನಾದಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೃಢಪಡಿಸಿದೆ. ಎಲ್ಲ 10 ಐಪಿಎಲ್ ಫ್ರಾಂಚೈಸಿಗಳು ಮಿನಿ ಹರಾಜಿಗೂ ಮುಂಚಿತವಾಗಿ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಶನಿವಾರ ಪ್ರಕಟಿಸಿವೆ.
ಸಂಜು ಸ್ಯಾಮ್ಸನ್ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದೊಂದಿಗೆ ಟ್ರೇಡ್ ಒಪ್ಪಂದದ ಭಾಗವಾಗಿ ಸೇರಿಕೊಂಡಿದ್ದರೂ, ಮುಂಬರುವ ಆವೃತ್ತಿಯಲ್ಲಿ ರುತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಆಂಡ್ರೆ ರಸೆಲ್ ಅವರನ್ನು ಬಿಡುಗಡೆ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮೂರು ಬಾರಿಯ ಚಾಂಪಿಯನ್ ತಂಡವು ಕಳೆದ ವರ್ಷದ ಅತಿಹೆಚ್ಚು ಹಣ ನೀಡಿ ಖರೀದಿಸಿದ್ದ ವೆಂಕಟೇಶ್ ಅಯ್ಯರ್ ಅವರನ್ನು (₹ 23.75 ಕೋಟಿ) ಸಹ ಬಿಡುಗಡೆ ಮಾಡಿದೆ.
ಈಮಧ್ಯೆ, ಐಪಿಎಲ್ 2025ರ ಮೆಗಾ ಹರಾಜಿಗೆ ಮುಂಚಿತವಾಗಿ 13 ಕೋಟಿ ರೂ.ಗೆ ಉಳಿಸಿಕೊಂಡಿದ್ದ ಶ್ರೀಲಂಕಾದ ವೇಗಿ ಮತೀಷಾ ಪತಿರಾನಾ ಅವರನ್ನು ಸಿಎಸ್‌ಕೆ ಕೈಬಿಟ್ಟಿದೆ. ಆಸ್ಟ್ರೇಲಿಯಾದ ಪವರ್‌ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಐಪಿಎಲ್ 2025ರ ರನ್ನರ್ ಅಪ್ ತಂಡ ಪಂಜಾಬ್ ಕಿಂಗ್ಸ್ ಕೈಬಿಟ್ಟಿದೆ.
ಮುಂದಿನ ತಿಂಗಳ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತೀವ್ರ ಬಿಡ್ಡಿಂಗ್ ಯುದ್ಧವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ವೆಂಕಟೇಶ್ ಮತ್ತು ರಸೆಲ್ (ರೂ. 12 ಕೋಟಿ) ಅವರಂತಹ ಆಟಗಾರರನ್ನು ಬಿಡುಗಡೆ ಮಾಡಿದ ನಂತರ ಕೆಕೆಆರ್ ಪರ್ಸ್‌ನಲ್ಲಿ 64.30 ಕೋಟಿ ರೂ.ಗಳೊಂದಿಗೆ ಹರಾಜಿಗೆ ಪ್ರವೇಶಿಸಿದರೆ, ಸಿಎಸ್‌ಕೆ, ಸ್ಯಾಮ್ಸನ್ ಅವರನ್ನು ಟ್ರೇಡ್ ಮಾಡಿದರೂ, ಹಲವಾರು ಆಟಗಾರರನ್ನು ಕೈಬಿಡುವ ಮೂಲಕ 40 ಕೋಟಿ ರೂ.ಗಳನ್ನು ಉಳಿಸಿಕೊಂಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತಮ್ಮ ತಂಡವನ್ನು ಮೊದಲಿನಿಂದಲೂ ಪುನರ್ನಿರ್ಮಿಸಲು ನೋಡುತ್ತಿದೆ. ಆದರೆ, ಸಿಎಸ್‌ಕೆ ತಮ್ಮ ಬೌಲಿಂಗ್ ದಾಳಿಯನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಮಥೀಶಾ ಪತಿರಾನಾ ಅವರನ್ನು ಮರಳಿ ಖರೀದಿಸಲು ಪ್ರಯತ್ನಿಸಬಹುದು ಅಥವಾ ಆಶಸ್ ಸರಣಿ ನಂತರ ಲಭ್ಯವಿದ್ದರೆ ಬೆನ್ ಸ್ಟೋಕ್ಸ್ ಅವರನ್ನು ಗುರಿಯಾಗಿಸಿಕೊಳ್ಳಬಹುದು.
ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ಸುನೀಲ್ ನರೈನ್, ವರುಣ್ ಚಕ್ರವರ್ತಿ, ರಿಂಕು ಸಿಂಗ್, ಹರ್ಷಿತ್ ರಾಣಾ ಮತ್ತು ಆಂಗ್‌ಕ್ರಿಶ್ ರಘುವಂಶಿ ಸೇರಿದಂತೆ ಪ್ರಮುಖ ಆಟಗಾರರನ್ನು ಉಳಿಸಿಕೊಂಡು KKR ಕ್ವಿಂಟನ್ ಡಿ ಕಾಕ್, ಮೊಯಿನ್ ಅಲಿ ಮತ್ತು ಅನ್ರಿಚ್ ನಾರ್ಟ್ಜೆ ಅವರನ್ನು ಬಿಡುಗಡೆ ಮಾಡಿದೆ. ಅವರಿಗೆ ಆರು ವಿದೇಶಿ ಸ್ಲಾಟ್‌ಗಳು ಸೇರಿದಂತೆ 13 ಸ್ಲಾಟ್‌ಗಳು ಲಭ್ಯವಿದೆ.
ಮತ್ತೊಂದೆಡೆ, ಸಿಎಸ್‌ಕೆ ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಆರ್ ಅಶ್ವಿನ್ (ನಿವೃತ್ತ), ದೀಪಕ್ ಹೂಡಾ, ಸ್ಯಾಮ್ ಕರನ್ ಮತ್ತು ಮಥೀಶಾ ಪತಿರಾನಾ ಅವರಂತಹ ಆಟಗಾರರನ್ನು ಬಿಡುಗಡೆ ಮಾಡಿದೆ.