ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲುಕಂಡ ಭಾರತ ತಂಡ ಇದೀಗ ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿಯಲ್ಲೂ ಕುಸಿತ ಅನುಭವಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಘಾತಕಾರಿ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ ನೀಡಿದ್ದ 123 ರನ್ ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 93 ರನ್ ಗಳಿಗೆ ಆಲೌಟ್ ಆಯಿತು.
ಆ ಮೂಲಕ 30 ರನ್ ಗಳ ಹೀನಾಯ ಸೋಲು ದಾಖಲಿಸಿತು. ಈ ಗೆಲುವಿನೊಂದಿಗೆ ಆಫ್ರಿಕಾ ಪಡೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಈ ಪಂದ್ಯದ ಸೋಲಿನ ಬೆನ್ನಲ್ಲೇ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿಯಲ್ಲಿ ಭಾರತ ತಂಡ ಒಂದು ಸ್ಥಾನ ಕುಸಿದಿದ್ದು, 4ನೇ ಸ್ಥಾನಕ್ಕೆ ತೃಪ್ಟಿಪಟ್ಟುಕೊಳ್ಳುವಂತಾಗಿದೆ.
ಈ ಪಂದ್ಯ ಆರಂಭಕ್ಕೂ ಮುನ್ನ ಶೇ. 61.90 ರಷ್ಟು ಗೆಲುವಿನ ಸರಾಸರಿಯೊಂದಿಗೆ 3ನೇ ಸ್ಥಾನದಲ್ಲಿದ್ದ ಭಾರತ ತಂಡ ಈ ಪಂದ್ಯ ಸೋಲಿನ ಬಳಿಕ ಗೆಲುವಿನ ಸರಾಸರಿ ಶೇ.54.17ಕ್ಕೆ ಕುಸಿದಿದೆ. ಇದರೊಂದಿಗೆ ತಂಡ ಕೂಡ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದ್ದು, 4ನೇ ಸ್ಥಾನಗಲ್ಲಿದ್ದ ಶ್ರೀಲಂಕಾ ತಂಡ 66.67 ಗೆಲುವಿನ ಸರಾಸರಿಯೊಂದಿಗೆ 3ನೇ ಸ್ಥಾನಕ್ಕೇರಿದೆ.
ಉಳಿದಂತೆ ಪಟ್ಟಿಯಲ್ಲಿ ಶೇ,100ರಷ್ಟು ಗೆಲುವಿನ ಸರಾಸರಿ ಹೊಂದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದು, ಭಾರತದ ವಿರುದ್ಧ ಗೆದ್ದು ಗೆಲುವಿನ ಸರಾಸರಿಯನ್ನು ಶೇ.66.67ಕ್ಕೆ ಏರಿಸಿಕೊಂಡ ದಕ್ಷಿಣ ಆಫ್ರಿಕಾ ತಂಡ 2ನೇ ಸ್ಥಾನಕ್ಕೆ ಜಿಗಿದಿದೆ.