ನವದೆಹಲಿ: ಕುತ್ತಿಗೆ ನೋವಿನಿಂದಾಗಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಲಭ್ಯತೆ ಬಗ್ಗೆ ಅನುಮಾನವಿದ್ದರೂ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಗುವಾಹಟಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಿಸಿಸಿಐ ಬುಧವಾರ ಪ್ರಕಟಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 30 ರನ್‌ಗಳಿಂದ ಸೋಲು ಕಂಡಿದ್ದು, ಎರಡನೇ ದಿನದಂದು 26 ವರ್ಷದ ಗಿಲ್ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದರು.
ಮೊದಲ ಇನಿಂಗ್ಸ್‌ನಲ್ಲಿ ಗಾಯಗೊಂಡು ರಿಟೈರ್ಡ್ ಹರ್ಟ್ ಆದ ನಂತರ ಅವರು ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ದಕ್ಷಿಣ ಆಪ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನವೆಂಬರ್ 22 ರಂದು ಪ್ರಾರಂಭವಾಗುತ್ತದೆ.
'ಶುಭಮನ್ ಗಿಲ್ ವೈದ್ಯಕೀಯ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಮತ್ತು ನವೆಂಬರ್ 19 ರಂದು ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಲಿದ್ದಾರೆ. ಗಿಲ್ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು 2ನೇ ಟೆಸ್ಟ್‌ನಲ್ಲಿ ಅವರು ಭಾಗವಹಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಿಲ್ ಭಾಗವಹಿಸುವ ಸಾಧ್ಯತೆ ಕಡಿಮೆ ಇರುವುದರಿಂದ, ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ಭಾರತ ಎ ಸರಣಿಯಿಂದ ಹೊರಗಿಡಲಾಗಿದೆ.
ಆಂಧ್ರ ಪ್ರದೇಶದ ಬ್ಯಾಟಿಂಗ್ ಆಲ್‌ರೌಂಡರ್ ಸೋಮವಾರ ಸಂಜೆ ಕೋಲ್ಕತ್ತಾ ತಲುಪಿದ್ದು, ಮಂಗಳವಾರ ನಡೆದ ನೆಟ್ ಸೆಷನ್‌ನಲ್ಲಿ ಭಾಗವಹಿಸಿಲ್ಲ. ಒಂದು ವೇಳೆ ಗಿಲ್ ಪಂದ್ಯದಿಂದ ಹೊರಗುಳಿದರೆ, ನಿತೀಶ್ ಕುಮಾರ್ ರೆಡ್ಡಿ ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.