ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಕಳೆದೊಂದು ವಾರದಿಂದ ಮದುವೆ ವಿಚಾರಗಳಿಗಾಗಿ ಜಾಸ್ತಿ ಸುದ್ದಿಯಾಗಿದ್ದರು. ಬಳಿಕ ಅವರ ತಂದೆ ಶ್ರೀನಿವಾಸ್ ಮಂಧಾನ ಮತ್ತು ಭಾವಿ ಪತಿ ಪಲಾಶ್ ಮುಚ್ಚಲ್ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಸುದ್ದಿಯಾಗಿತ್ತು. ಕುಟುಂಬದಲ್ಲಿನ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಸ್ಮೃತಿ ಮತ್ತು ಅವರ ಭಾವಿ ವರ ಪಲಾಶ್ ಮುಚ್ಚಲ್ ಅವರು ಭಾನುವಾರ ನಡೆಯಬೇಕಿದ್ದ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದರು. ಇದೀಗ ಶ್ರೀನಿವಾಸ್ 'ಅಪಾಯದಿಂದ ಪಾರಾಗಿದ್ದಾರೆ' ಎಂದು ಪರಿಗಣಿಸಲಾಗಿದೆ ಮತ್ತು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಕುಟುಂಬವು ಮದುವೆಯ ಬಗ್ಗೆ ಮೌನ ತಾಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆಸ್ಪತ್ರೆ ಆಡಳಿತ ಮಂಡಳಿ ಪ್ರಕಾರ, ಸ್ಮೃತಿ ಮಂಧಾನ ಅವರ ತಂದೆ ಈಗ ಸಂಪೂರ್ಣವಾಗಿ ಸ್ಥಿರರಾಗಿದ್ದಾರೆ. ಹೃದಯ ಸ್ಥಿತಿ ಇನ್ನು ಮುಂದೆ ಯಾವುದೇ ಬೆದರಿಕೆಯನ್ನು ಒಡ್ಡುತ್ತಿಲ್ಲ. ವೈದ್ಯರು ಶ್ರೀನಿವಾಸ್ ಅವರ ಆಂಜಿಯೋಗ್ರಫಿಯನ್ನು ಸಹ ಮಾಡಿದ್ದು, ಅದರಲ್ಲಿ ಯಾವುದೇ ಅಡಚಣೆಗಳು ಕಂಡುಬಂದಿಲ್ಲ ಎಂದು ಇಂಡಿಯಾ ಟಿವಿ ವರದಿ ತಿಳಿಸಿದೆ.
ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾದ ನಂತರ, ಎರಡೂ ಕುಟುಂಬಗಳ ಸದಸ್ಯರಿಂದ ಬಂದ ಹಲವಾರು ಮಾಹಿತಿಗಳು ವಿವಾಹ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ದೃಢಪಡಿಸಿವೆ. ಮತ್ತೆ ಮದುವೆ ಯಾವಾಗ ಎನ್ನುವುದರ ಬಗ್ಗೆ ಎರಡೂ ಕುಟುಂಬಗಳು ಇನ್ನೂ ಪರಿಷ್ಕೃತ ಯೋಜನೆಯನ್ನು ಹಂಚಿಕೊಂಡಿಲ್ಲ.
'ಬೆಳಗ್ಗೆ ಸ್ಮೃತಿ ಅವರ ತಂದೆ ಉಪಾಹಾರ ಸೇವಿಸುತ್ತಿದ್ದಾಗ, ಅವರ ಆರೋಗ್ಯ ಹದಗೆಟ್ಟಿತು. ಅವರು ಗುಣಮುಖರಾಗುತ್ತಾರೆಂದು ಭಾವಿಸಿ ನಾವು ಸ್ವಲ್ಪ ಸಮಯ ಕಾಯ್ದೆವು. ಆದರೆ ಸ್ಥಿತಿ ಮತ್ತಷ್ಟು ಹದಗೆಟ್ಟಾಗ, ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದೆವು. ಸ್ಮೃತಿ ಅವರು ತಮ್ಮ ತಂದೆಗೆ ತುಂಬಾ ಹತ್ತಿರವಾಗಿದ್ದಾರೆ. ಅವರು ಗುಣಮುಖರಾಗುವವರೆಗೆ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ನಿರ್ಧರಿಸಿದ್ದಾರೆ. ತಂದೆ ಸಂಪೂರ್ಣವಾಗಿ ಗುಣಮುಖರಾದ ಬಳಿಕವೇ ಅವರು ಮದುವೆಯಾಗುವುದಾಗಿ ಸ್ಮೃತಿ ಸ್ಪಷ್ಟವಾಗಿ ಹೇಳಿದ್ದಾರೆ' ಎಂದು ಸ್ಮೃತಿ ಅವರ ಮ್ಯಾನೇಜರ್ ತುಹಿನ್ ಮಿಶ್ರಾ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾದ ನಂತರ ಭಾನುವಾರ ಹೇಳಿದ್ದರು.
ಮದುವೆಗೆ ಸಂಬಂಧಿಸಿದ ಎಲ್ಲ ಪೋಸ್ಟ್ ಅಳಿಸಿದ ಸ್ಮೃತಿ
ಸ್ಮೃತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ವಿವಾಹಪೂರ್ವ ಸಂಭ್ರಮದ ಎಲ್ಲ ಚಿತ್ರಗಳು ಮತ್ತು ವಿಡಿಯೋಗಳನ್ನು ಅಳಿಸಿದ್ದಾರೆ. ಇನ್ನೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಟೀಂ ಇಂಡಿಯಾದ ಸಹ ಆಟಗಾರ್ತಿಯರಾದ ಜೆಮಿಮಾ ರೊಡ್ರಿಗಸ್ ಮತ್ತು ಶ್ರೇಯಾಂಕಾ ಪಾಟೀಲ್ ಅವರಂತಹ ಎಲ್ಲ ಆಟಗಾರ್ತಿಯರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ವಿವಿಧ ವಿವಾಹಪೂರ್ವ ಸಮಾರಂಭಗಳ ಕೆಲವು ವಿಡಿಯೋಗಳನ್ನು ಅಳಿಸಿದ್ದಾರೆ ಎಂದು ವರದಿಯಾಗಿದೆ. ಇದು ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿದೆ.
ಪರಿಷ್ಕೃತ ವಿವಾಹ ಸಮಾರಂಭದ ದಿನಾಂಕವನ್ನು ಕುಟುಂಬ ಇನ್ನೂ ದೃಢಪಡಿಸಿಲ್ಲವಾದ್ದರಿಂದ ಕೆಲವು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಈ ಸಸ್ಪೆನ್ಸ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವದಂತಿಗಳಿಗೆ ಕಾರಣವಾಗಿದೆ.