ನವದೆಹಲಿ: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡ ಪ್ರಕಟವಾಗಿದ್ದು, ಏಕದಿನ ತಂಡದ ನಾಯಕ ಸ್ಥಾನದಿಂದ ರೋಹಿತ್ ಶರ್ಮಾರಿಗೆ ಕೊಕ್ ನೀಡಿ ಶುಭ್ ಮನ್ ಗಿಲ್ ರನ್ನು ನೂತನ ನಾಯಕರಾಗಿ ಆಯ್ಕೆ ಮಾಡಲಾಗಿದೆ.
ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾರನ್ನು ಇದೀಗ ಏಕದಿನ ಕ್ರಿಕೆಟ್ ನ ನಾಯಕತ್ವದಿಂದಲೂ ದೂರ ಇಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದೇ ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾದ ವೈಟ್-ಬಾಲ್ ಪ್ರವಾಸಕ್ಕೂ ಮುನ್ನ ಭಾರತದ ಏಕದಿನ ತಂಡದ ನಾಯಕನಾಗಿ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅವರನ್ನು ಶನಿವಾರ ನೇಮಿಸಲಾಗಿದೆ.
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುನ್ನ ನಾಯಕತ್ವದಲ್ಲಿ ಕ್ರಮೇಣ ಬದಲಾವಣೆಯ ಸೂಚನೆಯಾಗಿ ಗಿಲ್ ಅವರನ್ನು ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ.
ಮೌನ ಮುರಿದ BCCI ಹೇಳಿದ್ದೇನು?
ಶುಭ್ ಮನ್ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸುವ ನಿರ್ಧಾರದ ಬಗ್ಗೆ, ಬಿಸಿಸಿಐನ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮಾಹಿತಿ ನೀಡಿದ್ದಾರೆ. ತಂಡದ ಆಯ್ಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ 'ತಂಡದ ಭವಿಷ್ಯದ ಹಿತಾಸಕ್ತಿಯಿಂದ ತಂಡ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಮುಂಬರುವ ಏಕದಿನ ವಿಶ್ವಕಪ್‌ಗೆ ದೀರ್ಘಾವಧಿಯ ತಯಾರಿಯ ಬಗ್ಗೆ ಒತ್ತಿ ಹೇಳಿದ ಅವರು, 'ನಾಯಕತ್ವ ಬದಲಾವಣೆಯ ಬಗ್ಗೆ ರೋಹಿತ್ ಶರ್ಮಾ ಅವರಿಗೆ ತಿಳಿಸಲಾಗಿದೆ. ನಾವು ಹೆಚ್ಚು ಏಕದಿನ ಪಂದ್ಯಗಳನ್ನು ಆಡುವುದಿಲ್ಲ. ಮುಂದಿನ ಆಟಗಾರನಿಗೆ ಸಾಕಷ್ಟು ಸಮಯ ನೀಡಬೇಕಾಗಿತ್ತು. ನಾಯಕನನ್ನು ಬದಲಾಯಿಸುವ ನಿರ್ಧಾರವನ್ನು ರೋಹಿತ್ ಹೇಗೆ ತೆಗೆದುಕೊಂಡಿದ್ದಾರೆ ಎಂಬುದು ಅವರ ಮತ್ತು ಆಯ್ಕೆ ಸಮಿತಿಯ ನಡುವೆ ಇರುತ್ತದೆ" ಎಂದು ಅಗರ್ಕರ್ ಹೇಳಿದರು.
ಈ ವರ್ಷದ ಆರಂಭದಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು. ಇದು ರೋಹಿತ್ ಶರ್ಮಾ ಅವರ ಏಕದಿನ ನಾಯಕನ ಅಂತಿಮ ನಿಯೋಜನೆಯಾಗಿತ್ತು. ನಾಯಕತ್ವ ಬದಲಾವಣೆ ಇದು "ಕಠಿಣ ನಿರ್ಧಾರ''ವಾಗಿತ್ತು ಎಂದು ಅಗರ್ಕರ್ ಒಪ್ಪಿಕೊಂಡರು.
"ಅವರು ಗೆಲ್ಲದಿದ್ದರೂ ಸಹ, ಅದು ಕಠಿಣ ನಿರ್ಧಾರವಾಗುತ್ತಿತ್ತು. ಆದರೆ ಕೆಲವೊಮ್ಮೆ ನೀವು ಭವಿಷ್ಯ ನೋಡಬೇಕಾಗುತ್ತದೆ. ನಿಮ್ಮ ಸ್ಥಾನ, ತಂಡದ ಹಿತಾಸಕ್ತಿ ಇತ್ಯಾದಿ. ಅದಾಗ್ಯೂ ಇದು ಕಠಿಣ ನಿರ್ಧಾರ" ಎಂದು ಹೇಳಿದರು.