ಮುಂಬೈ: ಬಹು ನಿರೀಕ್ಷಿತ ರಣಜಿ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಮುಂಬೈ ಮತ್ತು ಮಹಾರಾಷ್ಟ್ರ ತಂಡಗಳ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ.
ಹೌದು.. ಮುಂಬೈನ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಅಭ್ಯಾಸ ಪಂದ್ಯವನ್ನು ಆಯೋಜಿಸಲಾಗಿದ್ದು, ಈ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ತನ್ನ ಸಹ ಆಟಗಾರನ ಮೇಲೆ ಬ್ಯಾಟ್ ನಿಂದ ಹಲ್ಲೆ ಮಾಡಲು ಮುಂದಾದ ಘಟನೆ ನಡೆದಿದೆ.
ಅ. 7ರಂದು ನಡೆದ ಪಂದ್ಯದ ದಿನದಾಟದಲ್ಲಿ ಮಹಾರಾಷ್ಟ್ರ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ 181 ರನ್ ಗಳಿಸಿದ್ದಾಗ ಮುಶೀರ್ ಖಾನ್ ಬೌಲಿಂಗ್ ನಲ್ಲಿ ಔಟಾದರು. ಈ ಸಂದರ್ಭದಲ್ಲಿ ಮುಶೀರ್ ಖಾನ್ ಅವರು ಪೃಥ್ವಿ ಶಾ ಔಟಾಗುತ್ತಲೇ ಸಂಭ್ರಮಿಸಿದರು. ಇದರಿಂದ ರೊಚ್ಚಿಗೆದ್ದ ಪೃಥ್ವಿ ಶಾ ವಾಕ್ಸಮರ ನಡೆಸಿ ಬ್ಯಾಟ್ ನಿಂದ ಹಲ್ಲೆಗೆ ಮುಂದಾದರು.
ಆಗಿದ್ದೇನು?
ದಿನದಾಟದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಪೃಥ್ವಿ ಶಾ, 181 ರನ್ ಬಾರಿಸಿದರು. ಅವರು 181 ರನ್ ಗಳಿಸಿದ್ದಾಗ ಮುಶೀರ್ ಖಾನ್ ಅವರ ಬೌಲಿಂಗ್ ನಲ್ಲಿ ಔಟಾದರು. ಕ್ರೀಸ್ ನಿಂದ ತೆರಳುತ್ತಿದ್ದ ಪೃಥ್ವಿ ಶಾ ಅವರಿಗೆ ಮುಶೀರ್ ಅವರು ಟಾಟಾ ಬೈಬೈ ಎಂದು ಸಂಜ್ಞೆ ಮಾಡಿದರು.
ಇದು ಪೃಥ್ವಿ ಶಾ ಅವರನ್ನು ಕೆರಳಿಸಿದೆ. ಈ ವೇಳೆ ಮುಶೀರ್ ಜೊತೆಗೆ ಅಲ್ಲಿಯೇ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಒಂದು ಹಂತದಲ್ಲಿ ಮುಶೀರ್ ಮೇಲೆ ಪೃಥ್ವಿ ಶಾ ಬ್ಯಾಟ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮಾಧ್ಯಮವೊಂದು ವರದಿಯಾಗಿದೆ.
ಅಂಪೈರ್ ಗಳ ಮಧ್ಯ ಪ್ರವೇಶ
ಈ ವೇಳೆ ಪಂದ್ಯದ ಅಂಪೈರ್ ಗಳು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಗೊಳಿಸಿ ದೂರ ಸರಿಸಿದ್ದಾರೆ. ಆದರೂ ಪೃಥ್ವಿ ಶಾ ಅವರು ಕುದಿಯುತ್ತಲೇ ಇದ್ದರು. ಈ ವೇಳೆ ಮುಶೀರ್ ಖಾನ್ ನತ್ತ ನಡೆದ ಪೃಥ್ವಿ ಶಾ ಅವರನ್ನು ಅವರ ತಂಡದ ಸಹ ಆಟಗಾರ ಸಿದ್ದೇಶ್ ಲಾಡ್ ಅವರು ತಡೆದರು.