ನವದೆಹಲಿ: ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತ ತಂಡವು ಐದನೇ ಮತ್ತು ಕೊನೆಯ ದಿನದಂದು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಏಳು ವಿಕೆಟ್‌ಗಳಿಂದ ಜಯಗಳಿಸಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ಒಂದು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿತ್ತು. ಐದನೇ ದಿನ ಮತ್ತೆ ಆಟ ಮುಂದುವರಿಸಿದ ಭಾರತ ತಂಡವು ಉಳಿದ 58 ರನ್‌ಗಳನ್ನು ಗಳಿಸಿ 121 ರನ್‌ಗಳ ಗುರಿಯನ್ನು 35.2 ಓವರ್‌ಗಳಲ್ಲಿ ತಲುಪಿತು.
ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ 8 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ 108 ಎಸೆತಗಳಲ್ಲಿ ಔಟಾಗದೆ 58 ರನ್ ಗಳಿಸಿದರು ಮತ್ತು ಸಾಯಿ ಸುದರ್ಶನ್ (76 ಎಸೆತಗಳಲ್ಲಿ 39) ಅವರೊಂದಿಗೆ ಎರಡನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟವಾಡಿದರು.
ಸಾಯಿ ಸುದರ್ಶನ್ ಔಟಾದ ನಂತರ ಬಂದ ನಾಯಕ ಶುಭಮನ್ ಗಿಲ್ 15 ಎಸೆತಗಳಲ್ಲಿ 13 ರನ್ ಗಳಿಸಿ ಆಫ್-ಸ್ಪಿನ್ನರ್ ರೋಸ್ಟನ್ ಚೇಸ್ ಅವರಿಗೆ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ (ಅಜೇಯ 6) ಭಾರತವನ್ನು ಸುಲಭ ಗೆಲುವಿನತ್ತ ಕೊಂಡೊಯ್ದರು.
ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 140 ರನ್ ಅಂತರದ ಗೆಲುವು ಸಾಧಿಸಿತ್ತು.
ಯಶಸ್ವಿ ಜೈಸ್ವಾಲ್ (175) ಮತ್ತು ಶುಭಮನ್ ಗಿಲ್ ಅವರ ಅಜೇಯ ಶತಕದ (129) ನೆರವಿನಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಕಳೆದುಕೊಂಡು 518 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ಗುರಿ ಬೆನ್ನತ್ತಿದ ವಿಂಡೀಸ್ 248 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ 270 ರನ್‌ಗಳ ಮುನ್ನಡೆ ಕಾಯ್ದುಕೊಂಡಿದ್ದ ಭಾರತ ಎದುರಾಳಿ ತಂಡದ ಮೇಳೆ ಫಾಲೋ ಆನ್ ಹೇರಿತ್ತು.
ಎರಡನೇ ಇನಿಂಗ್ಸ್‌ನಲ್ಲಿ ಭಾರತಕ್ಕೆ ಸವಾಲೊಡ್ಡಿದ್ದ ವಿಂಡೀಸ್ 390 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಭಾರತಕ್ಕೆ 121ರನ್‌ಗಳ ಗುರಿ ನೀಡಿತ್ತು.
2011ರಲ್ಲಿ ಮುಂಬೈ ಪಂದ್ಯದ ನಂತರ ವೆಸ್ಟ್ ಇಂಡೀಸ್ ವಿರುದ್ಧ ಭಾರತದಲ್ಲಿ ಐದನೇ ದಿನಕ್ಕೆ ಕಾಲಿಟ್ಟ ಮೊದಲ ಟೆಸ್ಟ್ ಇದಾಗಿದೆ.