ನವದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಕೊನೆಯ ಅವಧಿಯಲ್ಲಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಜಸ್ಟಿನ್ ಗ್ರೀವ್ಸ್ ಭಾರತ ತಂಡಕ್ಕೆ ನಿರಾಶೆ ಉಂಟುಮಾಡಿದರು. ಗ್ರೀವ್ಸ್ ಅಜೇಯ ಅರ್ಧಶತಕ ಗಳಿಸುವ ಮೂಲಕ ಸೋಮವಾರ ಎರಡನೇ ಇನಿಂಗ್ಸ್‌ನಲ್ಲಿ ತಂಡದ ಮೊತ್ತವನ್ನು 390 ರನ್‌ಗಳಿಗೆ ತಲುಪಲು ನೆರವಾದರು. ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್ ಹತ್ತನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟವಾಡಿದರು. ಇದರಿಂದಾಗಿ ಭಾರತದ ನಾಯಕ ಶುಭ್‌ಮನ್ ಗಿಲ್ ಮತ್ತು ಅವರ ಬೌಲಿಂಗ್ ಘಟಕವು ತಲೆ ಕೆಡಿಸಿಕೊಳ್ಳುವಂತಾಯಿತು. ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹೆಚ್ಚಿನ ರನ್ ಗಳಿಸದಂತೆ ಗ್ರೀವ್ಸ್‌ಗೆ ಎಚ್ಚರಿಕೆ ನೀಡಿದರು.
4ನೇ ದಿನದಾಟದ ಅಂತಿಮ ಅವಧಿಯಲ್ಲಿ ಆಟ ಪ್ರಾರಂಭವಾಗುವ ಮೊದಲು ಸಿರಾಜ್ ಗ್ರೀವ್ಸ್ ಬಳಿಗೆ ನಡೆದು, ತಮಾಷೆಯ ಎಚ್ಚರಿಕೆಯನ್ನು ನೀಡಿದರು. ಸಿರಾಜ್ ಅವರ ನಡೆ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಮುಖದಲ್ಲಿ ನಗು ತರಿಸಿದೆ. ಈ 'ಎಚ್ಚರಿಕೆ'ಯ ಹೊರತಾಗಿಯೂ, ಗ್ರೀವ್ಸ್ ಅವರು ಜೇಡನ್ ಸೀಲ್ಸ್ ಜೊತೆಗೆ ಉತ್ತಮ ಜೊತೆಯಾಟವಾಡಿದರು ಮತ್ತು ಭಾರತಕ್ಕೆ ಕೊಂಚ ನಿರಾಸೆ ಉಂಟುಮಾಡಿದರು. ಜಸ್ಪ್ರೀತ್ ಬುಮ್ರಾ ಅವರು ಸೀಲ್ಸ್ ಅವರನ್ನು ಔಟ್ ಮಾಡಿದರು.
ಗ್ರೀವ್ಸ್-ಸೀಲ್ಸ್ ಜೋಡಿಯು ವೆಸ್ಟ್ ಇಂಡೀಸ್ ತಂಡದ ಪರವಾಗಿ ಐತಿಹಾಸಿಕ ಜೋಡಿಯಾಗಿತ್ತು. ವಾಸ್ತವವಾಗಿ, ಭಾರತದ ನೆಲದಲ್ಲಿ ಟೆಸ್ಟ್‌ನಲ್ಲಿ ಹತ್ತನೇ ವಿಕೆಟ್‌ಗೆ ಐವತ್ತಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ಆಡಲು ಪ್ರವಾಸಿ ತಂಡವೊಂದು ಎಂಟು ವರ್ಷಗಳ ಕಾಲ ತೆಗೆದುಕೊಂಡಿತು. ವೆಸ್ಟ್ ಇಂಡೀಸ್ ಜೋಡಿಯಾದ ಜಸ್ಟಿನ್ ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್ ಭಾರತದ ವಿರುದ್ಧ 79 ರನ್‌ಗಳ ಅದ್ಭುತ ಜೊತೆಯಾಟದೊಂದಿಗೆ ಆ ಕಾಯುವಿಕೆಯನ್ನು ಕೊನೆಗೊಳಿಸಿದರು.
ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದ ತಮ್ಮ ತಂಡಕ್ಕೆ ಈ ಜೋಡಿ ಗಮನಾರ್ಹ ನೆರವಾಯಿತು. ಒತ್ತಡದ ನಡುವೆಯೂ ಶಾಂತವಾಗಿದ್ದ ಗ್ರೀವ್ಸ್, ಅರ್ಧಶತಕ ಗಳಿಸಿದರು. 85 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗುಳಿದರು. ಇದರಲ್ಲಿ ಮೂರು ಬೌಂಡರಿಗಳನ್ನು ಒಳಗೊಂಡಿದೆ. ಇನ್ನೊಂದು ತುದಿಯಲ್ಲಿ, ಸೀಲ್ಸ್ ಅಮೂಲ್ಯವಾದ 32 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜೇಡನ್ ಸೀಲ್ಸ್ ಮತ್ತು ಜಸ್ಟಿನ್ ಗ್ರೀವ್ಸ್ ಅವರ 10ನೇ ವಿಕೆಟ್ ಜೊತೆಯಾಟ ಮತ್ತು ಶಾಯಿ ಹೋಪ್ ಮತ್ತು ಜಾನ್ ಕ್ಯಾಂಪ್ಬೆಲ್ ಅವರ ಶತಕಗಳ ನೆರವಿನಿಂದ ಭಾರತಕ್ಕೆ 121 ರನ್‌ಗಳ ಗುರಿಯನ್ನು ನೀಡಲಾಯಿತು.