ಮಹಿಳಾ ವಿಶ್ವಕಪ್ 2025ರ ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೂರನೇ ತಂಡ ಇಂಗ್ಲೆಂಡ್ ಆಗಿದೆ. ಭಾರತದ ವಿರುದ್ಧ ಕೇವಲ 4 ರನ್‌ಗಳ ಗೆಲುವಿನೊಂದಿಗೆ, ಇಂಗ್ಲೆಂಡ್ ಇದೀಗ ಸ್ಥಾನ ಗಿಟ್ಟಿಸಿಕೊಂಡಿದೆ. ಇದೀಗ ಸೆಮಿಫೈನಲ್‌ಗೆ ಒಂದು ಸ್ಥಾನ ಮಾತ್ರ ಉಳಿದಿದೆ. ಗುರುವಾರ ಭಾರತ ಮತ್ತು ನ್ಯೂಜಿಲೆಂಡ್ ಸೆಣಸಲಿದ್ದು, ಗೆದ್ದ ತಂಡ ಸೆಮೀಸ್ ತಲುಪಲಿದೆ.
ಭಾರತ vs ಇಂಗ್ಲೆಂಡ್ ಪಂದ್ಯದ ನಂತರ, ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿಯೇ ಉಳಿದಿದ್ದರೆ, ಇಂಗ್ಲೆಂಡ್ ಎರಡನೇ ಸ್ಥಾನಕ್ಕೆ ಜಿಗಿದಿದೆ. ದಕ್ಷಿಣ ಆಫ್ರಿಕಾ ಮೂರನೇ ಸ್ಥಾನಕ್ಕೆ ಕುಸಿದಿದೆ. ನ್ಯೂಜಿಲೆಂಡ್‌ಗಿಂತ ಉತ್ತಮ ನೆಟ್ ರನ್ ರೇಟ್‌ನೊಂದಿಗೆ ಭಾರತ 4ನೇ ಸ್ಥಾನದಲ್ಲಿದೆ.
2025ರ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡ ಆಸ್ಟ್ರೇಲಿಯಾ. ಕೊಲಂಬೊದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದ ರದ್ದಾದ ನಂತರ ದಕ್ಷಿಣ ಆಫ್ರಿಕಾ ಕೂಡ ಅರ್ಹತೆ ಪಡೆಯಿತು.
ಏಷ್ಯಾದ ಮೂರು ತಂಡಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನ ಕೊನೆಯ ಮೂರು ಸ್ಥಾನಗಳನ್ನು ಪಡೆದಿವೆ. ಯಾವುದೇ ತಂಡಗಳು ಇನ್ನೂ ಹೊರಬಿದ್ದಿಲ್ಲವಾದರೂ, ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳು ಕಡಿಮೆ.
2025ರ ಮಹಿಳಾ ವಿಶ್ವಕಪ್‌ನಲ್ಲಿ 8 ತಂಡಗಳು ಪರಸ್ಪರ ಒಮ್ಮೆ ಮುಖಾಮುಖಿಯಾಗುತ್ತವೆ. ಲೀಗ್ ಹಂತದ ನಂತರ ಅಗ್ರ 4 ತಂಡಗಳು ಸೆಮಿಫೈನಲ್‌ಗೆ ತಲುಪುತ್ತವೆ. ಪ್ರತಿ ಗೆಲುವಿಗೆ 2 ಅಂಕಗಳು ಎಣಿಕೆಯಾಗುತ್ತವೆ. ಟೈ ಅಥವಾ ಮಳೆಯಿಂದ ರದ್ದಾದ ಪಂದ್ಯದಲ್ಲಿ ತಲಾ ಒಂದು ಅಂಕ ಉಭಯ ತಂಡಗಳಿಗೂ ಹಂಚಿಕೆಯಾಗುತ್ತದೆ.